Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯ ಎಸ್.ವಿ.ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸರಕಾರ ರಚನೆಗೆ ಚುನಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕನ ಆಯ್ಕೆಗಾಗಿ ಸಾರ್ವತ್ರಿಕ ಚುನಾವಣೆಯ ಎಲ್ಲಾ ವಿಧಾನಗಳನ್ನು ಅನುಸರಿಸಿ ವಿದ್ಯಾರ್ಥಿ ಚುನಾವಣೆ ನಡೆಸುತ್ತಿದ್ದು, ಒಂದೆಡೆ ಮುಂಗಾರಿನ ಬಿರುಮಳೆ ಮಳೆಗಾಲದ ಆರಂಭಕ್ಕೆ ಮುನ್ನುಡಿ ಬರೆಯುತ್ತಿದ್ದರೆ. ಇನ್ನೊಂದೆಡೆ ಶಾಲೆಯ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭ ಶಾಲಾ ವಿದ್ಯಾರ್ಥಿ ಸರಕಾರದ ರಚನೆಯ ಪ್ರಕ್ರಿಯೆಯ ಮೂಲಕ ಬಿರುಸು ಪಡೆದಿತ್ತು. ಈ ಶೈಕ್ಷಣಿಕ ವರ್ಷದ ಚುನಾವಣೆ ಜಿಟಿ ಜಿಟಿ ಮಳೆ ನಡುವೆ ನಡೆಯಿತು.

ಚುನಾವಣೆಗೆ ಒಂದು ವಾರ ಮುಂಚಿತವಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿ ನಾಮಪತ್ರ ಪರಿಶೀಲನೆ ನಡೆಸಿ ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ನಂತರ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.ಚುನಾವಣೆಗೆ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಚಿಹ್ನೆಗಳನ್ನೊಳಗೊಂಡ ಮತಪತ್ರ ಬಳಸಲಾಗಿತ್ತು. ಶಾಲಾ ನಾಯಕನ ಚುನಾವಣೆಗೆ ಕೆಂಪು ಬಣ್ಣದ ಹಾಗೂ ಉಪನಾಯಕನ ಚುನಾವಣೆಗೆ ಪಿಂಕ್ ಬಣ್ಣದ ದಪ್ಪ ಗೆರೆಯುಳ್ಳ ಮತಪತ್ರ ಬಳಸಲಾಗಿತ್ತು.

ನಾಮಪತ್ರದಲ್ಲಿ ಪ್ರತೀ ಅಭ್ಯರ್ಥಿಯ ಮತದಾರರ ಸಂಖ್ಯೆ ನಮೂದಿಸಿ ಅವರ ಸಹಿ ಪಡೆಯಲಾಗಿತ್ತು. ಪ್ರತೀ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದ ಬಳಿಕ ಮತ ಚಲಾಯಿಸುವ ಮತ್ತು ಮತಪತ್ರವನ್ನು ಮಡಚುವ ರೀತಿಯನ್ನು ವಿದ್ಯಾರ್ಥಿ ಮತದಾರರಿಗೆ ಮಾಹಿತಿ ನೀಡಿ ಮತಪತ್ರವನ್ನು ನೀಡಲಾಗುತ್ತಿತ್ತು. ಮತಪತ್ರ ನೀಡಿದ ನಂತರ ವ್ಯವಸ್ಥೆಗೊಳಿಸಲಾದ ಸ್ಥಳದಲ್ಲಿ ತಮಗಿಷ್ಟವಾದ ಅಭ್ಯರ್ಥಿಯ ಭಾವಚಿತ್ರ ಹಾಗೂ ಹೆಸರಿನ ಎದುರಿನ ಚಿಹ್ನೆಗೆ ಮುದ್ರೆಯೊತ್ತಿ ಗುಪ್ತವಾಗಿ ಮತ ಚಲಾಯಿಸಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗಗಳಿಗೆ ಪ್ರತ್ಯೇಕ ನಾಯಕ ಮತ್ತು ಉಪನಾಯಕನ ಆಯ್ಕೆ ನಡೆಸುತ್ತಿರುವುದರಿಂದ ಎರಡು ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮತದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟು 221 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿದರು.

ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಗಿ ಪ್ರೌಢ ಶಾಲಾ ವಿಭಾಗದ ನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತ ಪಡೆದ 10ನೇ ತರಗತಿಯ ಅನುಶ್ರೀ ದೇವಾಡಿಗ ಶಾಲಾ ನಾಯಕಿಯಾಗಿ ಆಯ್ಕೆಯಾದರು. ಶಾಲಾ ಉಪನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ 8ನೇ ತರಗತಿಯ ಆಶ್ರಿತಾ ಕೆ. ಶಾಲಾ ಉಪನಾಯಕಿಯಾಗಿ ಆಯ್ಕೆಯಾದರು. ಪ್ರೌಢ ಶಾಲಾ ವಿಭಾಗದ ನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತ ಪಡೆದ ವೀಕ್ಷೀತಾ ಶಾಲಾ ನಾಯಕಿಯಾಗಿ ಆಯ್ಕೆಯಾದರು. ಶಾಲಾ ಉಪನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದ 9 ಮಂದಿ ಅಭ್ಯರ್ಥಿಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ವೀರೇಶ ಶಾಲಾ ಉಪನಾಯಕನಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಸಂಯೋಜನೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ಟ, ಸಹಶಿಕ್ಷಕರಾದ ಸುಜಾತಾ ದೇವಾಡಿಗ, ಶೈಲಜಾ, ಸುಪ್ರೀತಾ, ಪರಿಮಳ, ದಿವ್ಯಶ್ರೀ ಎನ್., ದೈಹಿಕ ಶಿಕ್ಷಣ ಶಿಕ್ಷಕರಾದ ರೇಷ್ಮಾ ಮೆಂಡೊನ್ಸಾ, ಸಂತೋಷ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

 

Exit mobile version