Kundapra.com ಕುಂದಾಪ್ರ ಡಾಟ್ ಕಾಂ

ವಂ.ಫಾದರ್ ಅನಿಲ್ ಡಿ ಸೋಜಾರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಹೋಲಿ ರೋಜರಿ ಚರ್ಚ್‌ನಿಂದ ಉಡುಪಿಯ ಪೆರಂಪಳ್ಳಿ ಚರ್ಚ್‌ಗೆ ವರ್ಗಾವಣೆಗೊಂಡ ಪ್ರಯುಕ್ತ ಕುಂದಾಪುರ ಸೈಂಟ್ ಮೇರಿಸ್ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಂದಾಪುರ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ನಿಕಟಪೂರ್ವ ಸಂಚಾಲಕ ಅತೀ.ವಂ.ಫಾ.ಅನಿಲ್ ಡಿ ಸೋಜಾರವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಪಾಠ ಮಾಡಿದಾಗ ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಂತಹ ಕೆಲಸ ಕುಂದಾಪುರದ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಸ್ತಿನ ಜತೆಗೆ ಜ್ಞಾನವನ್ನು ಸಂಪಾದಿಸುತ್ತಾರೆ ಎಂದು ಹೇಳಿದರು.

ಕುಂದಾಪುರ ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್ ಶೆಣೈ ಅಭಿನಂದನಾ ಭಾಷಣ ಮಾಡಿ ಫಾ.ಅನಿಲ್ ಡಿ ಸೋಜಾ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಕುಂದಾಪುರದ ಯಾವುದೇ ಜನಪರ ಕಾರ್ಯಕ್ರಮದಲ್ಲಿ ಅವರು ಮುಂಚೂಣಿಯಲ್ಲಿರುತ್ತಿದ್ದರು. ಎಲ್ಲರ ಜತೆಗೆ ಬೆರೆಯುವ ಗುಣವನ್ನು ಹೊಂದಿರುವ ಇವರು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಉಳ್ಳವರಾಗಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನಾ ವಹಿಸಿದ್ದರು. ಶಿಕ್ಷಕ ಭಾಸ್ಕರ ಗಾಣಿಗ ಅನಿಸಿಕೆಯನ್ನು ಹಂಚಿಕೊಂಡರು.

ಶಿಕ್ಷಕಿ ಅಸುಂತಾ ಲೋಬೋ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಡೋರತಿ ಸುವಾರಿಸ್ ವಂದಿಸಿದರು.

 

Exit mobile version