Kundapra.com ಕುಂದಾಪ್ರ ಡಾಟ್ ಕಾಂ

ಮಾರಣಕಟ್ಟೆ-ಸನ್ಯಾಸಿಬೆಟ್ಟು ಕಿರುಸೇತುವೆ ರಿವೀಟ್‌ಮೆಂಟ್ ಕಾಮಗಾರಿ ಅಪೂರ್ಣ: ಸಂಚಾರಕ್ಕೆ ತೊಂದರೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಾರಣಕಟ್ಟೆ-ಸನ್ಯಾಸಿಬೆಟ್ಟು ಸಂಪರ್ಕ ಕಿರುಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ‘ರಿವೀಟ್‌ಮೆಂಟ್’ ಕಾಮಗಾರಿ ಪೂರ್ಣಗೊಳ್ಳದೇ ಸಂಚಾರಕ್ಕೆ ತೊಡಕಾಗಿರುವುದು ನಿತ್ಯ ಪ್ರಯಾಣಿಕರ ಪಾಲಿಗೆ ಗೋಳಾಗಿದೆ.

ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು.

ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಸೇತುವೆ ನಿರ್ಮಾಣವಂತೂ ಪೂರ್ಣವಾಗಿದೆ. ಆದರೆ ಅವುಗಳ ಇಕ್ಕೆಲಗಳ ರಸ್ತೆಯ ಅಂಚಿಗೆ ಮಣ್ಣು ತುಂಬಿಸಿ ರಿವೀಟ್ಮೆಂಟ್ ಕಾಮಗಾರಿ ಆರಂಭಗೊಳ್ಳದಿರುವುದು ಸಂಚಾರಕ್ಕೆ ತೊಡಕಾಗಿದೆ. ರಿಕ್ಷಾ ಸಮೇತ ದ್ವಿಚಕ್ರ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ.

ಭಾರೀ ಮಳೆಯಿಂದಾಗಿ ರಸ್ತೆಯ ಬದಿಗೆ ತುಂಬಿಸಿದ ಮಣ್ಣು ನೀರು ಪಾಲಾಗಿದೆ. ಆ ಮಾರ್ಗವಾಗಿ ಸಾಗುವ ಮಂದಿಯ ಗೋಳು ಹೇಳತೀರದು. ಕಿರು ಸೇತುವೆ ನಿರ್ಮಾಣವಾದರೂ ಬಳಕೆಗೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲುಸಂಕ ನಿರ್ಮಾಣವಾಗಿದ್ದರೂ ಅದಕ್ಕೆ ಪೂರಕವಾಗಿ ನಿರ್ಮಿಸಬೇಕಾದ ರಿವೀಟ್ಮೆಂಟ್ ಗೆ ಸುಮಾರು 4 ಲಕ್ಷ ಅಂದಾಜು ವೆಚ್ಚ ತಗಲಲಿದೆ. ಆದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತಮಗೆ ಬಿಡುಗಡೆಯಾದ ರೂ. 10 ಲಕ್ಷಕ್ಕೆ ಸೀಮಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು ಮುಂದಿನ ಅನುದಾನಕ್ಕಾಗಿ ತಾ.ಪಂ., ಗ್ರಾ.ಪಂ. ಗಳು ಜಿ.ಪಂ. ಮೊರೆ ಹೋಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

 

Exit mobile version