Kundapra.com ಕುಂದಾಪ್ರ ಡಾಟ್ ಕಾಂ

ದಾನಿಗಳ ಮತ್ತು ಸಂಸ್ಥೆಗಳ ನೆರವಿನಿಂದ ಮೇಲ್‌ಗಂಗೊಳ್ಳಿ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಹಳೆ ವಿದ್ಯಾರ್ಥಿ ಶಿಕ್ಷಣ ಪ್ರೇಮಿ ಬಳಗ ಮೇಲ್‌ಗಂಗೊಳ್ಳಿ ಇವರ ವತಿಯಿಂದ ದಾನಿಗಳ ಮತ್ತು ಸಂಸ್ಥೆಗಳ ನೆರವಿನಿಂದ ಮೇಲ್‌ಗಂಗೊಳ್ಳಿ ಅಂಗನವಾಡಿ ಕೇಂದ್ರಕ್ಕೆ ನೀಡಲಾದ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕರ್ಣಾಟಕ ಬ್ಯಾಂಕಿನ ಹೊನ್ನಾವರ ಶಾಖೆಯ ಪ್ರಬಂಧಕ ಮಹಾಬಲ ಕೆ. ಮಾತನಾಡಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಸಂಘ ಸಂಸ್ಥೆಗಳ, ದಾನಿಗಳ ಸಹಕಾರ ಅಗತ್ಯ. ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಿಗೆ ನೀಡುವ ಕೊಡುಗೆಗಳು ಮಹತ್ವವೆನಿಸುತ್ತದೆ. ಶಿಕ್ಷಣಕ್ಕೆ ದಾನ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಳವೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಕ್ಲಸ್ಟರ್‌ನ ಸಿಆರ್‌ಪಿ ತಿಲೋತ್ತಮ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು, ಶಾಲೆಯ ಮುಖ್ಯಶಿಕ್ಷಕ ರಮೇಶ ಮಹಾಲೆ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ, ಸಹಶಿಕ್ಷಕಿ ಲಲಿತಾ ಶುಭ ಹಾರೈಸಿದರು. ನಾಗರಾಜ ಜಿ.ಎಂ., ಗಂಗೊಳ್ಳಿ ಫ್ರೆಂಡ್ಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಶಬ್ಬರ್ ಅಲಿ, ಜಗದೀಶ ಜಿ.ಎಂ., ಶಂಕರ ಮೇಲ್‌ಗಂಗೊಳ್ಳಿ, ನಿವೃತ್ತ ಬ್ಯಾಂಕ್ ಸಿಬ್ಬಂದಿ ಜಿ.ಈಶ್ವರ, ಅಂಗನವಾಡಿ ಶಿಕ್ಷಕಿ ಸಹನಾ ಮತ್ತಿತರರು ಉಪಸ್ಥಿತರಿದ್ದರು. ಸ್ಟೀಲ್ ಕಪಾಟು, ಪ್ಲಾಸ್ಟಿಕ್ ಕುರ್ಚಿಗಳು, ಸ್ಕೂಲ್ ಬ್ಯಾಗ್, ಡೆಸ್ಕ್, ಸಮವಸ್ತ್ರಗಳನ್ನು ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

ಸಹನಾ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Exit mobile version