Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿಯಿಂದ ಗ್ರಾಮ ಪಂಚಾಯತ್‌ಗೆ ಮನವಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿಯ ಬಂದರು ಪ್ರದೇಶದ ಸಮೀಪ ನಿರ್ಮಿಸಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿಯ ತನಿಖೆ ಮತ್ತು ಅವ್ಯವಹಾರದ ತನಿಖೆ ನಡೆಸುವಂತೆ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಬುಧವಾರ ಮನವಿ ಸಲ್ಲಿಸಿದೆ.

ಗಂಗೊಳ್ಳಿಯಲ್ಲಿ ಘನ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕಾರ್ಯಕ್ರಮ ನಡೆಸಲು ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ರೋಟರಿ ಸಂಸ್ಥೆಯವರು ನಿರ್ಮಿಸಿದ ಶೌಚಾಲಯ ಪ್ರದೇಶದಲ್ಲಿ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿ ಕೂಡ ಕಳಪೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಅವರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಅವರಿಗೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ  ಮನವಿ ಸಲ್ಲಿಸಿದ್ದಾರೆ.

ಶೌಚಾಲಯದ ಪ್ರಥಮ ಅಂತಸ್ತಿನಲ್ಲಿರುವ ಸ್ನಾನಗೃಹದ ಎಲ್ಲಾ ಜೋಡಣೆಗಳನ್ನು ತೆಗೆದು ಹಾಕಲಾಗಿದ್ದು ಬೇರಾವುದೇ ಕಾಮಗಾರಿ ನಿರ್ವಹಿಸಿಲ್ಲ. ಇರುವ ಏಕೈಕ್ ಬಾಗಿಲು ಕೂಡ ತುಕ್ಕು ಹಿಡಿದಿದೆ. ಮೇಲಂತಸ್ತಿನ ಒಳಗೆ ನೋಡಿದರೆ ಭೂತಬಂಗಲೆ ರೀತಿಯಲ್ಲಿ ಕಾಣುತ್ತಿದೆ. ನೆಲಅಂತಸ್ತಿನ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರದ ಕಛೇರಿ ಎಂದು ಹೇಳಲಾಗುತ್ತಿರುವ ಇಲ್ಲಿ ವಿದ್ಯುತ್ ಜೋಡಣೆ ಕಾಮಗಾರಿ ಸರಿಯಾಗಿ ನಡೆದಿಲ್ಲ. ವಿದ್ಯುತ್ ತಂತಿಗಳು ಕೈಗೆ ತಾಗುವಷ್ಟು ಕೆಳ ಮಟ್ಟದಲ್ಲಿದೆ. ಒಡೆದು ಹೋದ ಕಡೆಗಳಲ್ಲಿ ತೇಪೆ ಕೂಡ ಹಚ್ಚದೆ ಅದರ ಮೇಲೆ ಬಣ್ಣ ಬಳಿಯಲಾಗಿದೆ. ಕಟ್ಟಡದ ಒಳಗೆ ವಿದ್ಯುತ್ ಜೋಡಣೆ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಬಣ್ಣ ಬಳಿಯುವ ಅಥವಾ ಇನ್ನಿತರ ಕಾಮಗಾರಿಯನ್ನು ನಿರ್ವಹಿಸಿಲ್ಲ. ಕಟ್ಟಡದ ಹೊರ ಭಾಗವನ್ನು ಮಾತ್ರ ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಕಟ್ಟಡದ ಹೊರಭಾಗದಲ್ಲಿ ತಗಡು ಹೊದಿಕೆಯ ಶೆಡ್ ನಿರ್ಮಾಣ ಮಾಡಿರುವುದು ಬಿಟ್ಟರೆ ಶೌಚಾಲಯ ಕಟ್ಟಡದಲ್ಲಿ ಇನ್ನಾವುದೇ ಕಾಮಗಾರಿ ಮಾಡಿರುವುದಿಲ್ಲ. ಪ್ರಸ್ತುತ ನಿರ್ವಹಿಸಿದ ಈ ಕಾಮಗಾರಿಗಳಿಗೆ ಸುಮಾರು 7.5 ಲಕ್ಷ ರೂ. ಖರ್ಚಾಗಿದೆ ಎಂದು ಹೇಳುತ್ತಿರುವುದು ತೀವ್ರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಹಳೆ ಕಟ್ಟಡವನ್ನು ನವೀಕರಣ ಮತ್ತು ಶೆಡ್ ನಿರ್ಮಾಣಕ್ಕೆ ಸುಮಾರು 7.5 ಲಕ್ಷ ರೂ. ಖರ್ಚು ಮಾಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು, ಶೌಚಾಲಯ ಕಟ್ಟಡವನ್ನು ನವೀಕರಣ ಮಾಡದೇ ಕೇವಲ ಶೆಡ್ ನಿರ್ಮಾಣ ಮಾಡಲು ಲಕ್ಷಾಂತರ ರೂ. ಖರ್ಚು ಮಾಡಿರುವ ಹಿಂದೆ ಭಾರಿ ಗೋಲ್‌ಮಾಲ್ ನಡೆದಿರುವ ಶಂಕೆ ಇದ್ದು, ಕಾಮಗಾರಿ ಕೂಡ ಕಳಪೆಯಾಗಿದೆ. ಆದ್ದರಿಂದ ಕಾಮಗಾರಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಕಟ್ಟಡ ವ್ಯವಸ್ಥಿತವಾಗಿ ಸಿದ್ಧಗೊಂಡ ಬಳಿಕ ಕಟ್ಟಡದ ಉದ್ಘಾಟನೆ ನಡೆಸಬೇಕು. ಈಗ ಇರುವ ಸ್ಥಿತಿಯಲ್ಲಿ ಹಾಗೂ ಕಾಮಗಾರಿ ಬಗ್ಗೆ ತನಿಖೆ ನಡೆಸದೆ ಉದ್ಘಾಟನೆ ನಡೆಸಲು ಮುಂದಾದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ, ನಿರ್ಮಿತಿ ಕೇಂದ್ರದವರು ಕಾಮಗಾರಿಯನ್ನು ನಿರ್ವಹಿಸಿದ್ದು ಸಾರ್ವಜನಿಕರ ಆಕ್ಷೇಪಣೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿಯ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಮಾಧವ, ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ರಾಘವೇಂದ್ರ ಪೈ, ಸಮಿತಿಯ ಪ್ರಮುಖರಾದ ರತ್ನಾಕರ ಗಾಣಿಗ, ನವೀನ ದೊಡ್ಡಹಿತ್ಲು, ವಿಷ್ಣು ಕಾಂಚನ್, ವೆಂಕಟೇಶ ದೊಡ್ಡಹಿತ್ಲು, ಗಣೇಶ ಲೈಟ್‌ಹೌಸ್, ರಾಘವೇಂದ್ರ ಗಾಣಿಗ, ಯಶವಂತ ಖಾರ್ವಿ ಬೇಲಿಕೇರಿ, ಉದಯ ಖಾರ್ವಿ ಗುಡ್ಡೆಕೇರಿ, ವಿವೇಕ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

 

Exit mobile version