ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. 2015ರಲ್ಲಿ ವಿಧಾನ ಪರಿಷತ್ ಪಂಚಾಯತ್ ಪ್ರತಿನಿಧಿಯಾಗಿ ಬಿಜೆಪಿ ಪಕ್ಷದಿಂದ ಸ್ವರ್ಧಿಸಿ ಆಯ್ಕೆಯಾಗಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಶ್ವರಪ್ಪ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆಮಾಡಲಾಗಿದೆ.
ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದರೂ ಜನಸಾಮಾನ್ಯನಿಗೂ ಸುಲಭವಾಗಿ ದೊರಕುವ ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ.
ಮೂರ್ತೆದಾರರ ಹೋರಾಟದಲ್ಲಿ ರಾಜ್ಯದ ಗಮನ ಸೆಳೆದಿದ್ದ ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವಾಗಲೇ 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಮುಂದೆ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದ ಅವರು 2010ರಲ್ಲಿಯೂ ಮತ್ತೆ ಅವಿರೋಧ ಆಯ್ಕೆಕಂಡರು. ರಾಜ್ಯದಲ್ಲಿ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಜರಾಯಿ ಮಂತ್ರಿಯಾಗುವ ಅವಕಾಶ ಶ್ರೀನಿವಾಸ ಪೂಜಾರರಿಗೆ ಬಯಸದೆಯೇ ದೊರೆಕಿತ್ತಾದರೂ ಅದನ್ನು ಸಮರ್ಥವಾಗಿಯೇ ಬಳಸಿಕೊಂಡ ಅವರು ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನಕ್ಕೆ ಗರಿಷ್ಠ ಅನುದಾನ ನೀಡಿದ್ದರು. (ಕುಂದಾಪ್ರ ಡಾಟ್ ಕಾಂ) ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನಲಂಕರಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಸದ್ಯ ಹಿಂದೂಳಿದ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತ ಅವರ ಆಳವಾದ ಅರಿವು, ಅಧ್ಯಯನ ಹಾಗೂ ಗಟ್ಟಿಧ್ವನಿ ಇಡೀ ವ್ಯವಸ್ಥೆಗೆ ಒಂದಿಷ್ಟು ಬಲ ನೀಡಿದೆ.
ಶ್ರೀನಿವಾಸ ಪೂಜಾರರು ಒಬ್ಬ ಸೃಜನಶೀಲ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಆರಂಭದಲ್ಲಿ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿಸಿಕೊಂಡ ಅವರು ಬರವಣಿಗೆಯಲ್ಲಿಯೂ ಸಿದ್ಧಹಸ್ತರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಮ್ಮ ಕಮಲ ಎಂಬ ಪಂಚಾಯತ್ ರಾಜ್ ವ್ಯವಸ್ಥೆಯ ಬಗೆಗೆ ಮಾಸ ಪತ್ರಿಕೆಯೊಂದನ್ನು ಆರಂಭಿಸಿ ಅದರ ಸಂಪಾದಕರಾಗಿದ್ದಾರೆ. ಎಂತವರನ್ನೂ ಸೆಳೆಯಬಲ್ಲ ಮಾತಿನ ವರಸೆ ಪೂಜಾರಿಯವರಿಗೆ ಸುಲಭವಾಗಿ ಸಿದ್ಧಿಸಿದೆ. ಡಾ. ಶಿವರಾಮ ಕಾರಂತರ ಅಭಿಮಾನಿಯಾಗಿ ತನ್ನ ಹುಟ್ಟೂರಿನಲ್ಲಿ ಕಾರಂತ ಭವನ ನಿರ್ಮಾಣ, ಕಾರಂತ ಹುಟ್ಟೂರ ಪ್ರಶಸ್ತಿ ಸೇರಿದಂತೆ ಅವರ ನೆನಪನ್ನು ಕೋಟದಲ್ಲಿ ಚಿರಸ್ಥಾಯಿಯಾಗಿಸಿದ ಕೀರ್ತಿಯಲ್ಲಿ ಇವರದ್ದು ದೊಡ್ಡ ಪಾಲಿದೆ.