Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಶತಮಾನೋತ್ಸವ: ಠೇವಣಿ ಪತ್ರ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಶತಮಾನೋತ್ಸವ ಠೇವಣಿ ಪತ್ರ ಬಿಡುಗಡೆ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ ಗ್ರಾಮದ ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಅವರ ಜೀವನದಕ್ಕೆ ಸಹಕಾರ ನೀಡಬೇಕೆಂಬ ಉದ್ದೇಶದಿಂದ ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ 1920 ರಲ್ಲಿ ಆರಂಭಗೊಂಡ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಸ್ಥೆಯು ಅನೇಕ ವಿಶಿಷ್ಟ ಕಾರ್ಯಕ್ರಮ, ಯೋಜನೆಗಳನ್ನು ಸಹಕಾರಿಯ ಸದಸ್ಯರಿಗೆ ನೀಡುವ ಮೂಲಕ ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡಿದೆ ಎಂದು ಹೇಳಿದರು.

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಉತ್ತಮ ಕಾರ್ಯಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ. ಪ್ರಸ್ತುತ ಶತಮಾನದ ಹೊಸ್ತಿಲಿನಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಶತಮಾನೋತ್ಸವ ಠೇವಣಿ ಯೋಜನೆಯನ್ನು ಆರಂಭಿಸಿರುವುದು ಸ್ತುತ್ಯಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಸಹಕಾರಿಯು ಇನ್ನಷ್ಟು ಜನಪ್ರಿಯಗೊಂಡು ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗಂಗೊಳ್ಳಿ ಶಾಖಾ ಪ್ರಬಂಧಕ ರಾಘವೇಂದ್ರ ಉಡುಪ ಶುಭಾಶಂಸನೆಗೈದರು. ಇದೇ ಸಂದರ್ಭ ಪುರೋಹಿತ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಅವರಿಗೆ ಪ್ರಥಮ ಶತಮಾನೋತ್ಸವ ಠೇವಣಿ ಪತ್ರವನ್ನು ವಿತರಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ನಾರಾಯಣ ಪೂಜಾರಿ, ಮಹಾಬಲ ಪೂಜಾರಿ, ವತ್ಸಲಾ ಎಸ್.ಕಾಮತ್, ಮಾಲಾ ಕೆ.ನಾಯಕ್ ಉಪಸ್ಥಿತರಿದ್ದರು.

ನಿರ್ದೇಶಕ ಜಿ.ವೆಂಕಟೇಶ ಶೆಣೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಿ.ರಾಘವೇಂದ್ರ ಪೈ ವಂದಿಸಿದರು.

 

Exit mobile version