Kundapra.com ಕುಂದಾಪ್ರ ಡಾಟ್ ಕಾಂ

ನಾಲ್ಕು ಭಾರಿ ಶಾಸಕನನ್ನಾಗಿಸಿದ ಬೈಂದೂರು ಕ್ಷೇತ್ರದ ಋಣ ನನ್ನ ಮೇಲಿದೆ: ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿ ನೋಡಿ ಓಟು ನೀಡುತ್ತಾರೆ ಎಂದುಕೊಂಡಿದ್ದೇವು. ಆದರೆ ಬುದ್ಧಿವಂತ ಜಿಲ್ಲೆಯ ಜನರು ಅಪಪ್ರಚಾರಕ್ಕೆ ಮಣೆ ಹಾಕಿರುವುದು ಬೇಸರ ತರಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರವೊಂದಕ್ಕೆ ಸುಮಾರು ೨೦೦೦ ಕೋಟಿ ರೂ ಅನುದಾನವನ್ನು ತಂದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಆದರೆ ಚುನಾವಣೆಯಲ್ಲಿ ಕ್ಷೇತ್ರದಲ್ಲಾದ ಕೆಲಸವನ್ನು ಜನರಿಗೆ ಮರೆಮಾಚಿ ಹಿಂದೂತ್ವ, ಅಪಪ್ರಚಾರದ ಆಧಾರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ರೋಟರಿ ಭವನದಲ್ಲಿ ಜರುಗಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಪಕ್ಷ ಹಿಂದೂತ್ವದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ಆದರೆ ನೈಜವಾಗಿ ಹಿಂದೂತ್ವದ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದ್ದ ಸಂದರ್ಭ ದೇವಸ್ಥಾನಗಳ ಜೀಣೋದ್ಧಾರಕ್ಕೆ ಅತಿ ಹೆಚ್ಚಿನ ಅನುದಾನ ನೀಡಿದೆ. ದೇವಳದಲ್ಲಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ನೀಡುತ್ತಿದ್ದ ಸಂಬಳ ಹೆಚ್ಚಿಸಲಾಗಿದೆ.

ಜಿಲ್ಲೆಯ ಬಿಜೆಪಿ ಶಾಸಕರು ಗೆದ್ದ ಬಳಿಕ ಕೇಂದ್ರದಿಂದ ಸೀಮೆಎಣ್ಣೆ ಬಿಡುಗಡೆಗೊಳಿಸುತ್ತೇವೆ, ಮರುಳುಗಾರಿಕೆಗೆ ಅನುಮತಿ ದೊರಕಿಸಿಕೊಂಡು ಬರುತ್ತೇವೆ ಎಂಬೆಲ್ಲಾ ಆಶ್ವಾಸನೆ ನೀಡಿದ್ದರು. ಆದರೆ ಈವರೆಗೆ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಬೈಂದೂರು ಕ್ಷೇತ್ರದಲ್ಲಿ ಖಾಸಗಿಯವರೊಂದಿಗೆ ಶಾಮಿಲಾಗಿ ಸರಕಾರಿ ಬಸ್ಸುಗಳ ಒಡಾಟಕ್ಕೆ ತಡೆತಂದಿದ್ದಾರೆ. ಮಾತೆತ್ತಿದರೆ ನಮ್ಮ ಸರಕಾರ ಇಲ್ಲ ಎನ್ನುವವರಿಗೆ, ಸರಕಾರ ಯಾವುದೇ ಇರಲಿ ಜನರಿಗಾಗಿ ಕೆಲಸ ಮಾಡುವ ಮನಸ್ಸಿದ್ದರೆ ಕ್ಷೇತ್ರಕ್ಕೆ ಅನುದಾನ ತರಲು ಸಾಧ್ಯವಿದೆ. ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ ಮಾಡುತ್ತೇನೆಂದು ಚುನಾವಣೆ ಗೆದ್ದು ಬಂದವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದರು.

ಬೈಂದೂರು ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ನಾಲ್ಕು ಭಾರಿ ತನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಜೆಡಿಎಸ್ ಸರಕಾರ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನಿಂದಾದ ಕೆಲಸ ಮಾಡುತ್ತೇನೆ. ವಾರಾಹಿ ಬಲದಂಡೆ ಯೋಜನೆಯನ್ನೂ ಕೈಗೊಳ್ಳುವಂತೆ ನೀರಾವರಿ ಸಚಿವರಿಗೂ ಒತ್ತಡ ತರುವ ಕೆಲಸ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ರಾಜಕಾರಣದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವುದು ಮತ್ತು ಅತಿ ವಿಶ್ವಾಸವನ್ನಿರಿಸುವುದು ಅಪಾಯಕಾರಿ. ಪ್ರತಿಪಕ್ಷಗಳ ಅಪಪ್ರಚಾರದ ತಂತ್ರಕ್ಕೆ ಪ್ರತ್ಯುತ್ತರ ನೀಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೈರ್ಯದ ಕೊರತೆಯಿಂದಾಗಿ ಕ್ಷೇತ್ರಕ್ಕಾಗಿ ಕೆಲಸ ಮಾಡಿದವರು ಈ ಭಾರಿ ಸೋತಿದ್ದಾರೆ. ಆದರೆ ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ನಾಯಕರೊಬ್ಬರೂ ಸೋತಾಗ ಅಲ್ಲಿಯ ಕಾರ್ಯಕರ್ತರಿಗೂ ಧೈರ್ಯತುಂಬಿ ಅವರೊಂದಿಗೆ ಪಕ್ಷ ಎಂದಿಗೂ ಇದೆ ಎಂಬ ವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ರಿಯಾಜ್ ಅಹಮ್ಮದ್, ಪಿ.ಎಲ್ ಜೋಸ್, ವಾಸುದೇವ ಯಡಿಯಾಳ, ಅಶೋಕ್ ಕೊಡವೂರು, ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಜಗದೀಶ್, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಎಸ್. ರಾಜು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Exit mobile version