Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ಪೊಲೀಸ್ ದೇಶಕ್ಕೆ ಮಾದರಿ: ಡಿವೈಎಸ್‌ಪಿ ಬಿ. ಪಿ ದಿನೇಶ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಅಪರಾಧಗಳನ್ನು ಕಡಿಮೆ ಮಾಡುವಲ್ಲಿ ದೇಶಕ್ಕೆ ಮಾದರಿಯಾಗಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಸರಕಾರ ಇಲಾಖೆಯನ್ನು ಬಲಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿದ್ದು, ಇತ್ತೀಚಿಗೆ ಜಾರಿಗೆ ತಂದಿರುವ ಜನಸಾಮಾನ್ಯರನ್ನೊಳಗೊಂಡ ಸುಧಾರಿತ ಬೀಟ್ ವ್ಯವಸ್ಥೆ ಯಶಸ್ವಿಯಾಗುತ್ತಿದೆ ಎಂದು ಪೊಲೀಸ್ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ.ದಿನೇಶ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಗಂಗೊಳ್ಳಿ ಆಶ್ರಯದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಸಹಕಾರದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾಹನ ಚಾಲಕರು ಹಾಗೂ ಮಾಲಕರಿಗೆ ಶನಿವಾರ ಜರಗಿದ ’ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಮಾಹಿತಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮೂಲ ಉದ್ದೇಶವಾಗಿದ್ದು, ಜನಸಾಮಾನ್ಯರು ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಪೊಲೀಸ್ ಇಲಾಖೆಯ ಮತ್ತು ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಸರಕಾರ ಸಹಕರಿಸುತ್ತಿದ್ದು, ನಾವು ಮಾಡುವುದು ಸಮಾಜಸೇವೆ ಎನ್ನುವ ದೃಷ್ಟಿಕೋನವನ್ನಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಆತ್ಮತೃಪ್ತಿ ದೊರೆಯುತ್ತದೆ ಎಂದರು ಅವರು ಹೇಳಿದರು.

ಅಪಘಾತಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ವಾಹನ ಚಾಲಕ, ಮಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ. ಅಪಘಾತರಹಿತ ಚಾಲನೆ ವಾಹನ ಚಾಲಕರ ಮುಖ್ಯ ಧ್ಯೇಯವಾಗಿರಬೇಕು. ವಾಹನಗಳಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಪತ್ರಗಳನ್ನು ಇಟ್ಟುಕೊಂಡು ತಪಾಸಣೆ ಸಂದರ್ಭ ಇಲಾಖಾಧಿಕಾರಿಗಳಿಗೆ ಹಾಜರುಪಡಿಸಬೇಕು. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಪ್ರಾಣಿಗಳಿಗೆ ಪ್ರಥಮ ಆದ್ಯತೆ ನೀಡಬೇಕು. ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳ ನಡುವೆ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು. ವಾಹನ ಚಾಲಕರಿಗೆ ಪಾರ್ಕಿಂಗ್ ಜ್ಞಾನ ಇಲ್ಲದಿರುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ಚಾಲಕರು ಪಾರ್ಕಿಂಗ್ ನಿಯಮಗಳ ಪರಿಪಾಲನೆ ಮಾಡಬೇಕು ಕ್ರಾಸ್‌ರೋಡ್ ಜಂಕ್ಷನ್‌ಗಳಲ್ಲಿ ವಾಹನ ಪಾರ್ಕಿಂಗ್ ಮಾಡಕೂಡದು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರು ತಮ್ಮ ಹಕ್ಕುಗಳ ಮಾತನಾಡುತ್ತಾರೆ ಆದರೆ ಕರ್ತವ್ಯದ ಬಗ್ಗೆ ಯಾರೂ ಮಾತನಾಡುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ಓವರ್ ಸ್ಪೀಡ್, ಅತಿವೇಗ ಮತ್ತು ಅಜಾರೂಕತೆ ಹಾಗೂ ಅಪಾಯಕಾರಿ ವಾಹನ ಚಾಲನೆ ಶಿಕ್ಷಾರ್ಹ, ದಂಡನಾರ್ಹ ಅಪರಾಧವಾಗಿದ್ದು, ವಾಹನ ಚಾಲನೆ ಸಂದರ್ಭ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವ್ಯವಹರಿಸಬೇಕಿದೆ ಎಂದು ಅವರು ಹೇಳಿದರು.

ಗಂಗೊಳ್ಳಿಯಲ್ಲಿ ಖಾಸಗಿ ಬಸ್ಸುಗಳಲ್ಲಿ ಮಿತಿ ಮೀರಿ ಶಾಲಾ ಮಕ್ಕಳನ್ನು ತುಂಬಿಸುತ್ತಿರುವುದು, ಸರಕಾರಿ ಬಸ್ಸುಗಳೊಂದಿಗೆ ಅನಗತ್ಯ ಪೈಪೋಟಿ ನಡೆಸುತ್ತಿರುವುದು, ಬಸ್ಸುಗಳು ಕುಂದಾಪುರದಿಂದ ಗಂಗೊಳ್ಳಿಗೆ ಸಂಚರಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಅವಧಿ ತೆಗೆದುಕೊಳ್ಳುತ್ತಿರುವುದು, ಅತಿ ವೇಗದಲ್ಲಿ ಬಸ್ ಚಲಾಯಿಸುತ್ತಿರುವುದು, ಸಿಕ್ಕ ಸಿಕ್ಕಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲುಗಡೆ ನೀಡುತ್ತಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹಾಗೂ ವಾಹನ ಚಾಲಕರು ಅಧಿಕಾರಿಗಳ ಗಮನ ಸೆಳೆದರು.

ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದ ಡಿವೈಎಸ್‌ಪಿ ದಿನೇಶ ಕುಮಾರ್, ಎಲ್ಲಾ ಬಸ್ಸುಗಳ ಪರ್ಮಿಟ್, ಮತ್ತು ಸಮಯದ ಪಟ್ಟಿಯನ್ನು ಪಡೆದು ಪರಿಶೀಲನೆ ನಡೆಸಬೇಕು. ನಿಗದಿತ ವೇಳೆಯಲ್ಲಿ ಎಲ್ಲಾ ಬಸ್ಸುಗಳು ಸಂಚರಿಸುವಂತೆ, ವೇಗವಾಗಿ ಅಜಾಗರೂಕತೆಯಿಂದ ವಾಹನ ಚಲಾಯಿಸದಂತೆ ಮತ್ತು ಸರಕಾರಿ ಬಸ್ಸುಗಳಿಗೆ ತೊಂದರೆ ನೀಡದಂತೆ ಹಾಗೂ ಬಸ್ಸು ನಿಲ್ದಾಣ ಹೊರತುಪಡಿಸಿ ಬೇರೆಲ್ಲೂ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದಂತೆ ಎಲ್ಲಾ ಬಸ್ಸು, ಮಾಲಕರು ಹಾಗೂ ಚಾಲಕರಿಗೆ ಎಚ್ಚರಿಕೆ ನೀಡುವಂತೆ ಅವರು ಆದೇಶಿಸಿದರು.

ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ವಿನಾಯಕ ಬಿಲ್ಲವ ಅವರು ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಗಂಗೊಳ್ಳಿ ರೋಟರಿ ಕ್ಲಬ್ ಕಾರ್ಯಕ್ರಮದ ಚೇರ್‌ಮೆನ್ ದಯಾನಂದ ಗಾಣಿಗ ಸ್ವಾಗತಿಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

Exit mobile version