ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಹುಪಾಲು ಕರಾವಳಿಯ ಕಲಾವಿದರೇ ನಟಿಸಿ, ನಿರ್ದೇಶಿಸಿರುವ; ವಿಭಿನ್ನ ಕಧಾ ಹಂದರದ ಸಿನೆಮಾ ಕತ್ತಲೆಕೋಣೆ ಸಿನೆಮಾ ಅಗಸ್ಟ್ 10ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಕುಂದಾಪುರ ಬೈಂದೂರು ಹಾಗೂ ಉಡುಪಿಯ ಚಿತ್ರಮಂದಿರಗಳಲ್ಲಿಯೂ ಮೊದಲ ವಾರವೇ ಬಿಡುಗಡೆಗೊಳ್ಳಲಿದೆ ಎಂದು ಕತ್ತಲೆಕೋಣೆ ಸಿನೆಮಾ ತಂಡದ ಅಶ್ವತ್ ಆಚಾರ್ಯ ಯಡಬೆಟ್ಟು ಹೇಳಿದರು.
ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ ಅವರ ಎಂಟು ವರ್ಷದ ಸಿನೆಮಾ ಕನಸು ಅಂತಿಮ ಘಟ್ಟ ತಲುಪಿದ್ದು ದೀಪಕ್ ಗಂಗಾಧರ್ ಮೂವೀಸ್ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದರು.
ಚಿತ್ರವನ್ನು ನಿರ್ದೇಶಿಸಿದರು ಸಂದೇಶ್ ಶೆಟ್ಟಿ ಆಜ್ರಿ ನಾಯಕ ನಟನಾಗಿ ಕಾಣಿಸಿಕೊಂಡಿರುವುದಲ್ಲದೇ, ಸಿನೆಮಾಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ನಾಯಕ ನಟಿಯಾಗಿ ಹೆನಿಕಾ ರಾವ್ ಮೊದಲ ಭಾರಿಗೆ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಪುತ್ರ ರಿತೀಕ್ ಮುರ್ಡೇಶ್ವರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಾಸ್ಯನಟ ರಘು ಪಾಂಡೇಶ್ವರ್ ಸೇರಿದಂತೆ ಹಲವಾರು ಕರಾವಳಿಯ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದು, ಬಹುಪಾಲು ಕರಾವಳಿಯ ಪ್ರದೇಶಗಳಲ್ಲಿಯೇ ಶೂಟಿಂಗ್ ನಡೆಸಲಾಗಿದೆ ಎಂದರು.
ಸಿನೆಮಾದ ಹಾಡುಗಳು ಈಗಾಗಲೇ ಬಿಡುಗಡೆಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಲ್ಕು ಹಾಡುಗಳ ಪೈಕಿ ಜೀ ಕನ್ನಡ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್ ಹಾಡಿರುವ ಒಂಟಿ ಕಾನನದಿ ನೀ ಹಾಡು ಯುಟ್ಯೂಬ್‌ನಲ್ಲಿ ೨.೪ ಮಿಲಿಯನ್ ವೀಕ್ಷಣೆಗೊಂಡಿದೆ. ಚಿತ್ರದ ಪ್ರಿಮಿಯರ್ ಶೋ ವೀಕ್ಷಿಸಿದ ವಿಮರ್ಷಕರು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟರಾದ ಓಂಗುರು ಬಸ್ರೂರು, ಚಂದ್ರಶೇಖರ ಬಸ್ರೂರು, ರಿತಿಕ್ ಮುರ್ಡೇಶ್ವರ್, ಸಹಾಯಕ ನಿರ್ದೇಶಕ ಸುನಿಲ್ ಉಪ್ಪುಂದ, ಸಂದೀಪ್ ಶೆಟ್ಟಿ ಆಜ್ರಿ ಉಪಸ್ಥಿತರಿದ್ದರು.