Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂತ್ವ ಪ್ರತಿಪಾದನೆಗೆ ಹಿಂದೂಗಳ ಒಗ್ಗಟ್ಟು ಅಗತ್ಯ: ವಿಲಾಸ ನಾಯಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ವಿಹಿಂಪ ಮತ್ತು ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶ ನಡೆಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಿ. ವಿಲಾಸ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆ ಇದ್ದು ಪ್ರತಿಯೊಂದು ಕ್ಷಣದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮ ರಾಷ್ಟ್ರ ಹಾಗೂ ಹಿಂದುತ್ವ ರಕ್ಷಣೆಗೆ ಪ್ರಾಣ ಕೊಡಲು ಸನ್ನದ್ಧರಾಗಬೇಕು. ಗ್ರಾಮ ಮಟ್ಟದಲ್ಲಿ ಪ್ರತಿ ಹಿಂದು ಮನೆಯ ಒರ್ವ ಸದಸ್ಯ ಸಂಘಟನೆಗೆ ಸೇರುವ ಮೂಲಕ ಹಿಂದು ಸಮಾಜ ರಕ್ಷಣೆಯ ನೇತಾರರಾಗಬೇಕು ಎಂದು ಕರೆ ನೀಡಿದರು.

ಹಿಂದು ಬಾಂಧವರು ಗೋವುಗಳ ಮಹತ್ವವನ್ನು ಅರಿತು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಹಿಂದು ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಯುವ ಜನರನ್ನು ದಾರಿ ತಪ್ಪಿಸಿ ನಾಶಗೊಳಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಹೀಗಾಗಿ ಹಿಂದು ಸಮಾಜ ಜಾಗೃತವಾಗಬೇಕು ಎಂದರು.

ಇಂದು ಹಿಂದೂ ಎಂದು ಹೇಳಿಕೊಂಡರೂ ಕೋಮುವಾದಿ ಎಂದು ಬಿಂಬಿಸುವ ವಾತಾವರಣ ಸೃಷ್ಠಿಯಾಗಿದೆ. ಹಿಂದೂಗಳೇ ತಮ್ಮ ಧರ್ಮಾಚರಣೆಗಳನ್ನು ಸ್ವತಂತ್ರವಾಗಿ ನಡೆಸದ ಸ್ಥಿತಿಗೆ ತಲುಪಿದೆ. ಹಿಂದೂ ಧರ್ಮವೆಂಬುದು ಒಂದು ಮತ, ಜಾತಿ ಹಾಗೂ ಪ್ರದೇಶಕ್ಕೆ ಸೀಮಿತವಾಗಿಲ್ಲ. ನಮ್ಮಲ್ಲಿ ಸಂಘಟನೆ ಇಲ್ಲವೆಂದಾದರೆ ಮತಾಂಧರು ರಾಜಾರೋಷವಾಗಿ ಮನೆಗಳಿಗೆ ನುಗ್ಗಿ ನಮ್ಮ ಮನೆಯ ಗೋವು ಹಾಗೂ ನಮ್ಮ ಅಕ್ಕ-ತಂಗಿಯರನ್ನು ಮುಲಾಜಿಲ್ಲದೇ ಎತ್ತಿಕೊಂಡು ಹೋಗಬಹುದು. ಆದರೆ ಇಂದು ಇಂತಹ ಸ್ಥಿತಿಯಲ್ಲಿ ಹಿಂದೂಗಳಿಗೆ ಧೈರ್ಯ ವಿಶ್ವಾಸವನ್ನು ತುಂಬುವ ಕೆಲಸವನ್ನು ವಿವಿಧ ಹಿಂದೂಪರ ಸಂಘಟನೆಗಳು ನಿರಂತರವಾಗಿ ಮಾಡುತ್ತಿದೆ. ಇದನ್ನು ಸಹಿಸದವರು ಕೋಮುವಾದಿ ಕೆಲಸ ಎನ್ನುತ್ತಿದ್ದಾರೆ ಎಂದವರು ವ್ಯಂಗವಾಡಿದರು.

ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ ಬಿಜೂರು ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಅದರಲ್ಲಿಯೂ ಶಿರೂರು ಗಡಿಭಾಗದಲ್ಲಿ ವಲಸೆ ಬಂದು ಸೇರಿಕೊಂಡ ಅನ್ಯ ಕೋಮಿನವರಿಗೆ ಅವರ ಪೂರ್ವಾಪರ ವಿಚಾರಿಸದೇ ನಿವೇಶನ ಹಂಚಿಕೆ ಮಾಡಿದ್ದಾರೆ. ಕೆಲವು ಆಯಕಟ್ಟಿನ ಸ್ಥಳಗಳು ಗೋಹತ್ಯೆ, ಗಾಂಜಾ ಸೇವನೆಯಂತಹ ಅಕ್ರಮ ಚಟುವಟಿಕೆಗಳ ಅಡ್ಡೆಯಾಗುತ್ತಿದೆ. ಹಿಂದೂ ಯುವಕ-ಯುವತಿಯರಿಗೆ ಆಮಿಷ ಒಡ್ಡುವ ಮೂಲಕ ಮತಾಂತರ ಮಾಡುವ ತಾಣಗಳು ತಾಲೂಕಿನಾದ್ಯಂತ ತಲೆ ಎತ್ತುತ್ತಿದ್ದರೂ ಕೂಡಾ ಪೋಲಿಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ. ಈ ವಿಚಾರವಾಗಿ ಖಂಡಿಸಿದರೆ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೇಟ್ ಮಾಡಿ ಕೇಸು ದಾಖಲಿಸಿ ರೌಡಿಶೀಟರ್ ಪಟ್ಟ ಕಟ್ಟುತ್ತಾರೆ. ಸಮಾಜದಲ್ಲಿ ತಪ್ಪು ಮಾಡುವವರು ಮಾಡುತ್ತಲೇ ಇದ್ದಾರೆ. ಇವರಿಗೆ ಮಾತ್ರ ಯಾವ ಶಿಕ್ಷೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಹಿಂಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್, ಕಾರ್ಯದರ್ಶಿ ಪ್ರಮೋದ್, ಬಜರಂಗದಳ ಜಿಲ್ಲಾ ಸಂಚಾಲಕ ಸುಧೀರ್ ನಿಟ್ಟೆ, ಕೊಲ್ಲೂರು ಬಜರಂಗದಳ ಸಂಚಾಲಕ ಸತೀಶ್ ಬಳೆಗಾರ್ ಉಪಸ್ಥಿತರಿದ್ದರು. ಬಜರಂಗದಳ ತಾಲೂಕು ಸಂಚಾಲಕ ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version