Kundapra.com ಕುಂದಾಪ್ರ ಡಾಟ್ ಕಾಂ

ಪುಸ್ತಕ ಓದಿನಿಂದ ಜ್ಞಾನ ಮತ್ತು ಆತ್ಮವಿಶ್ವಾಸ ವೃದ್ಧಿ: ನರೇಂದ್ರ ಗಂಗೊಳ್ಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಇದರ ಸಹಯೋಗದಲ್ಲಿ ’ನನ್ನ ಮೆಚ್ಚಿನ ಪುಸ್ತಕ’ ಸ್ವರ್ಧೆ ನಡೆಯಿತು.

ಅತಿಥಿಯಾಗಿದ್ದ ಲೇಖಕ ನರೇಂದ್ರ ಗಂಗೊಳ್ಳಿ ಮಾತನಾಡಿ ನಾವು ಯಾರದೋ ಒತ್ತಾಯಕ್ಕೆ ಮಣಿದು ಪುಸ್ತಕ ಓದದೇ, ನಮ್ಮ ಸ್ವಂತ ಆಸಕ್ತಿಯ ನೆಲೆಯಲ್ಲಿ ಓದಿ ತಿಳಿದುಕೊಳ್ಳಬೇಕು. ಇದರಿಂದ ನಮಗೆ ಇನ್ನೂ ಓದಬೇಕು, ತಿಳಿದುಕೊಳ್ಳಬೇಕು ಎನ್ನುವ ಹವ್ಯಾಸ ಬೆಳೆಯುತ್ತದೆ. ಆಗ ಸ್ವತಃ ಹೊಸತನದ ಹುಡುಕಾಟಕ್ಕೂ ನಾವೇ ತಯಾರಾಗುತ್ತೇವೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಪುಸ್ತಕ, ವಿಷಯ, ವಸ್ತು ಅಥವಾ ಮನುಷ್ಯನೇ ಆಗಲಿ ಅವರನ್ನು ಒಂದೇ ಬಾರಿಗೆ ನೋಡಿ ನಿರ್ಧರಿಸದೇ ಮತ್ತೆ ಮತ್ತೆ ಅದರ ತಿರುಳನ್ನು ತಿಳಿದುಕೊಂಡು ಅದರ ಬಗ್ಗೆ ಅರ್ಥೈಸಿಕೊಳ್ಳಬೇಕು. ಅಲ್ಲದೇ ಸಾಹಿತ್ಯ ಅಥವಾ ಯಾವುದೇ ಪುಸ್ತಕವಾಗಲಿ ಅದನ್ನು ಓದಿದಷ್ಟು ನಮ್ಮ ಜ್ಞಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ವಯಸ್ಸಿಗನುಸಾರವಾದ ಪುಸ್ತಕವನ್ನು ಓದಬೇಕೆ ಹೊರತು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವ ಅಥವಾ ಪಕ್ಷ, ಧರ‍್ಮ, ಜಾತಿ ಪರವಾಗಿರುವ ವಿಷಯಗಳಿಂದ ಆದಷ್ಟೂ ದೂರವಿರಿ ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ರೇಖಾ.ವಿ.ಬನ್ನಾಡಿ ಉಪಸ್ಥಿತರಿದ್ದರು.

ಡಾ.ಅರುಣ್ ಕುಮಾರ್ ಕನ್ನಡ ಪ್ರಾಧ್ಯಾಪಕರು ಮತ್ತು ಮೀನಾಕ್ಷಿ, ಇಂಗ್ಲೀಷ್ ಪ್ರಾಧ್ಯಾಪಕರು ಮತ್ತು ಶರಣ್ ಎಸ್.ಜೆ, ಇಂಗ್ಲೀಷ್ ಉಪನ್ಯಾಸಕರು ಇವರು ನನ್ನ ಮೆಚ್ಚಿನ ಪುಸ್ತಕ ಸ್ವರ್ಧೆಯ ನಿರ‍್ಣಾಯಕರಾಗಿ ಆಗಮಿಸಿದ್ದರು.

ನನ್ನ ಮೆಚ್ಚಿನ ಪುಸ್ತಕ ಸ್ಪರ‍್ಧೆಯಲ್ಲಿ ಪ್ರಥಮ ಬಹುಮಾನ – ಗೌತಮಿ ದ್ವಿತೀಯ ಬಿ.ಎಸ್.ಸಿ, ದ್ವಿತೀಯ ಬಹುಮಾನ – ಚೇತನಾ ಶಾನುಭಾಗ್, ದ್ವಿತೀಯ ಬಿ.ಎಸ್.ಸಿ, ಮತ್ತು ತೃತೀಯ ಬಹುಮಾನ- ಸೌಮ್ಯ, ಪ್ರಥಮ ಬಿ.ಎಸ್.ಸಿ, ಪಡೆದರು. ಸ್ಪರ‍್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ‍್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು.

ಕಾಲೇಜಿನ ಜಾಣ ಜಾಣೆಯರ ಬಳಗದ ಅಧ್ಯಕ್ಷರಾದ ವಿದ್ಯಾರ‍್ಥಿನಿ ಶಿವರಂಜಿನಿ ಸ್ವಾಗತಿಸಿದರು. ಉಪಾಧ್ಯಕ್ಷೆ ರಾಜೇಶ್ವರಿ ವಂದಿಸಿದರು. ವಿದ್ಯಾರ‍್ಥಿನಿ ಕೀರ‍್ತಿ ಎಸ್. ಕಾರ‍್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಅಮೃತಾ ಪರಿಚಯಿಸಿದರು.

Exit mobile version