Kundapra.com ಕುಂದಾಪ್ರ ಡಾಟ್ ಕಾಂ

ವ್ಯಕ್ತಿಗಳಿಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡ ಆರೋಪಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಕ್ರಮ ಗಣಿಗಾರಿಕೆ ಭೂ ಅತಿಕ್ರಮಣ ಪ್ರಕರಣಗಳ ಸಾಕ್ಷಿದಾರರಾಗಿದ್ದ ವ್ಯಕ್ತಿಯೊಬ್ಬರಿಗೆ ಹಾಗೂ ಆತನ ಜೊತೆಗಿದ್ದವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೈಂದೂರು ಕಾಲ್ತೋಡಿನ ಸಮೀಪದ ಹೇರಂಜಾಲು ಎಂಬಲ್ಲಿ ನಡೆದಿದೆ. ಕಾಲ್ತೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿರುವ ಜನಾರ್ಧನ ನಾಯಕ್ ಹಾಗೂ ಜೊತೆಗಿದ್ದ ಬಡಿಯ ಹಾಂಡ ಎಂಬುವರೇ ಗಂಭೀರ ಹಲ್ಲೆಗೊಳಗಾದವರು.

2017ರ ಅಕ್ಟೋಬರ್ನಲ್ಲಿ ಕಾಲ್ತೋಡಿನ ವಿಜಯ ಶೆಟ್ಟಿ ಎಂಬುವರ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧಿಸಿ ಎಸಿಬಿಗೆ ನೀಡಲಾಗಿದ್ದ ದೂರಿಗೆ ಹಲ್ಲೆಗೊಳಗಾಗಿರುವ ಜನಾರ್ಧನ ನಾಯಕ್ ಸಾಕ್ಷ್ಯ ನುಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಆರೋಪಿ ವಿಜಯ ಶೆಟ್ಟಿ ಜನಾರ್ಧನ ನಾಯಕ್ ಎಂಬುವರನ್ನು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಬೆದರಿಕೆ ಕರೆಯ ರೆಕಾರ್ಡನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಜನಾರ್ಧನ ನಾಯಕ್ ನೀಡಿದ್ದರು. ಆದರೆ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು ಬೆಂಗಳೂರಿನ ಎಸಿಬಿ ಅಧಿಕಾರಿಗಳು ನಾಲ್ಕು ದಿನದ ಹಿಂದೆ ಹೊಸಕೋಟೆ ಪ್ರದೇಶಕ್ಕೆ ಪರಿಶೀಲನೆ ನಡೆಸಲು ಆಗಮಿಸಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಬಡಿಯ ಹಾಂಡ ಅವರಿಗೆ ನಿಯಮದಂತೆ ಸಾಕ್ಷೀದಾರರನ್ನು ಕರೆಯಿಸಲಾಗಿತ್ತು. ಅದೇ ಸಂದರ್ಭ ಆರೋಪಿ ವಿಜಯ ಶೆಟ್ಟಿ ಮತ್ತು ತಂಡ ಮತ್ತು ಬಡಿಯ ಹಾಂಡ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಭಾನುವಾರ ಸಂಜೆ ಆರೋಪಿ ವಿಜಯ ಶೆಟ್ಟಿ ಎಂಬುವರು ಬಡಿಯ ಎಂಬುವರ ಕಡೆಯಿಂದ ಕೊಲೆ ಬೆದರಿಕೆ ಹಾಕಿರುವುದಾಗಿ ಬಡಿಯ ವಿರುದ್ಧ ದೂರು ನೀಡಿದ್ದು, ಸೋಮವಾರ ಬಡಿಯ ಹಾಂಡ ಮತ್ತು ಜನಾರ್ಧನ ನಾಯಕ್ರನ್ನು ಪೊಲೀಸರು ಠಾಣೆಗೆ ಬರಹೇಳಿದ್ದರು. ಅದರಂತೆ ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ರಿಕ್ಷಾದಲ್ಲಿ ಹೋಗುತ್ತಿರುವಾಗ ವಿಜಯ ಶೆಟ್ಟಿ ಹಾಗೂ ಮೂವರ ತಂಡ ಗಂಭೀರ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಜನಾರ್ದನ ನಾಯಕ್ ಅವರ ತಲೆಗೆ ಆಳ ಗಾಯವಾಗಿದ್ದು, ಬಡಿಯ ಹಾಂಡರ ಕೈ ಮೂಳೆ ಮುರಿದಿದೆ. ಇಬ್ಬರೂ ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Exit mobile version