ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಳೆಯಿಂದಾಗಿ ಸಂಪೂರ್ಣ ಕೆಟ್ಟು ಹೋಗಿದ್ದ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಕದಳಿ – ಮತ್ತಿಕೊಡ್ಲು ರಸ್ತೆಯನ್ನು ಕೆಳಹೊಸೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಒಂದು ದಿನದ ಶ್ರಮಾದಾನದ ಮೂಲಕ ದುರಸ್ತಿ ಮಾಡಿದರು.
ರಸ್ತೆ ದುರಸ್ತಿಗಾಗಿ ಹಲವು ಭಾರಿ ಗ್ರಾಮ ಪಂಚಾಯತಿಯ ಗಮನಕ್ಕೆ ತರಲಾಗಿತ್ತು. ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಪ್ರತೀ ವರ್ಷವೂ ಗ್ರಾಮ ಪಂಚಾಯಿತಿಯ ಅಲ್ಪ ಸ್ವಲ್ಪ ಅನುದಾನದಲ್ಲಿ ಮಣ್ಣು ಹಾಕಿ ದುರಸ್ತಿ ಮಾಡಿದರೂ, ಮಳೆಗಾಲ ಬಂತೆಂದರೆ ಇಲ್ಲಿಯ ಗ್ರಾಮಸ್ಥರಿಗೆ ವಾಹನದ ಪಯಣ ಕಷ್ಟಸಾಧ್ಯವಾಗುತ್ತಿತ್ತು. ಈ ವರ್ಷದ ಮಳೆಗೆ ರಸ್ತೆಯೆಲ್ಲ ಕೊಚ್ಚಿ ಹೋಗಿ, ಈ ರಸ್ತೆಯಲ್ಲಿ ವಾಹನ ಚಾಲನೆ ಅಸಾಧ್ಯವಾಗಿತ್ತು.
ಗ್ರಾಮಸ್ಥರ ಕಷ್ಟವನ್ನು ಮನಗಂಡ ಗ್ರಾಮದ ಯುವಕರು ಹೊಸೂರಿನ ಕಾಂಗ್ರೆಸ್ ಕಾರ್ಯಕರ್ತರಾದ ರಾಘವೇಂದ್ರ ಪೂಜಾರಿ ನೇತೃತ್ವದಲ್ಲಿ ಕೆಟ್ಟುಹೊಗಿದ್ದ ರಸ್ತೆಯನ್ನು ಕಲ್ಲು ಮಣ್ಣು ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಮಾಡವಷ್ಟು ದುರಸ್ತಿಗೊಳಿಸಲಾಯಿತು. ಈ ವರ್ಷವಾದರೂ ಸರಕಾರದಿಂದ ಅನುದಾನ ದೊರಕಲಿ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.