Kundapra.com ಕುಂದಾಪ್ರ ಡಾಟ್ ಕಾಂ

ಭಾರತ್ ಬಂದ್ : ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪೆಟ್ರೋಲ್. ಡೀಸಿಲ್, ಅನಿಲ ಸೇರಿದಂತೆ ಜೀವನಾವಶ್ಯಕ ಸಾಮಗ್ರಿಗಳ ಬೆಲೆ ಏರಿಕೆ ವಿರೋಧಿಸಿ ನೀಡಲಾದ ಭಾರತ್ ಬಂದ್ ಕರೆ ಅಂಗವಾಗಿ ಬೈಂದೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸೋಮವಾರ ಕೆಲಕಾಲ ಹೆದ್ದಾರಿ ತಡೆ ನಡೆಸಿದರು. ಹೆದ್ದಾರಿ ಮೇಲೆ ಕುಳಿತು ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಮೋದಿ ವಿರುದ್ಧ ಘೋಷಣೆ ಕೂಗಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಧುರೀಣರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ರಿಯಾಜ್ ಅಹಮದ್, ಎಸ್. ರಾಜು ಪೂಜಾರಿ, ಜೆಡಿಎಸ್ ನಾಯಕ ರವಿ ಶೆಟ್ಟಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿರುವುದರಿಂದ, ಅದರ ಫಲವಾಗಿ ಅನ್ಯ ಜೀವನಾವಶ್ಯಕ ವಸ್ತುಗಳ ಬೆಲೆಯೂ ಹೆಚ್ಚುತ್ತಿರುವುದರಿಂದ ಜನ ಸಾಮಾನ್ಯದ ಬದುಕು ದುಸ್ತರವಾಗಿದೆ. ದೇಶದ ಅಭಿವೃದ್ಧಿಯೊಂದಿಗೆ ಬೆಲೆ ಹತೋಟಿಯ ಭರವಸೆ ನೀಡಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಯಾವುದನ್ನೂ ಈಡೇರಿಸಿಲ್ಲ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿದ ಕಾರಣ ಜನರ ಖರೀದಿ ಸಾಮರ್ಥ್ಯ ಕುಸಿದಿದೆ. ಕೇಂದ್ರ ಸರ್ಕಾರದ ಹಲವು ನೀತಿಗಳು ಜನವಿರೋಧಿಯಾಗಿವೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದ್ದರೆ, ನೇಪಾಲ, ಬಾಂಗ್ಲಾ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ಅದನ್ನು ಒದಗಿಸಲಾಗುತ್ತಿದೆ. ಬೆಲೆ ಇಳಿಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಪತ್ರಕರ್ತರ ಜತೆ ಪ್ರತ್ಯೇಕವಾಗಿ ಮಾತನಾಡಿದ ಗೋಪಾಲ ಪೂಜಾರಿ ಈಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಚುನಾವಣೆ ಎದುರಿಸಲು ’ಅಜೇಯ ಭಾರತ, ಅಟಲ್ ಬಿಜೆಪಿ’ ಘೋಷಣೆ ಹೊರಡಿಸಲಾಗಿದೆ. ಮೋದಿ ಅವರ ವರ್ಚಸ್ಸು ಕುಸಿದಿರುವುದನ್ನು ಅರ್ಥಮಾಡಿಕೊಂಡಿರುವ ಅವರು ಈಗ ಅಟಲ್ ಅವರ ಹೆಸರನ್ನು ಮುನ್ನೆಲೆಗೆ ತಂದು ಮತ ಗಳಿಸುವ ತಂತ್ರ ನಡೆಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ನೊಂದಿರುವ ಮತದಾರರು ಈ ತಂತ್ರಕ್ಕೆ ಮರುಳಾಗುವುದಿಲ್ಲ ಎಂದರು. ಇಂದಿನ ಬಂದ್ ಆರಂಭ ಮಾತ್ರ. ಬೆಲೆ ಏರಿಕೆ, ಹೆದ್ದಾರಿ ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪ ಖಂಡಿಸಿ ಇದೇ 18ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪರೇಶ್ ಮೇಸ್ತನ ಸಾವಿನ ತನಿಖೆ ನಡೆಸಲು ಸಿಬಿಐ ವೈಫಲ್ಯವನ್ನು ಖಂಡಿಸಿ ಬೈಂದೂರಿನಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದರು.

Exit mobile version