Kundapra.com ಕುಂದಾಪ್ರ ಡಾಟ್ ಕಾಂ

ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪುರ: ದೇವಳಕ್ಕೆ ಬರುವ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ವಿನಿಯೋಗಿಸದೇ, ಸಾಮಾಜಿಕ ಕಾರ್ಯಗಳಿಗೂ ವಿನಿಯೋಗಿಸುವುದರ ಮೂಲಕ ಈ ಭಾಗದ ಬಡ ಜನರ ಏಳಿಗೆಗಾಗಿ ಶ್ರಮಿಸಲು ನಾವು ಮುಂದಡಿಯಿಟ್ಟಿದ್ದು, ಆ ಕಾರಣದಿಂದ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಕೃಷ್ಣಪ್ರಸಾದ್ ಅಡ್ಯಂತಾಯ ಹೇಳಿದರು.

ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಘಟಕ, ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಮಣಿಪಾಲ ಕರ್ಸೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ಶ್ರೀ ಮೂಕಾಂಬಿಕಾ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್.  ರಾಜ್ಯ ಆರೋಗ್ಯ ಶಿಬಿರ ಉಪಸಮಿತಿಯ ಸಂಚಾಲಕ ಡಾ. ಸುಂದರ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೋಹಿಣಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್. ಜಯಕರ ಶೆಟ್ಟಿ, ರಕ್ತದಾನ ಶಿಬಿರದ ಸಂಯೋಜಕ ಬಾಲಕೃಷ್ಣ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಎ. ನಿತ್ಯಾನಂದ ಶೆಟ್ಟಿ, ಯುವ ಬಂಟರ ಸಂಘದ ಸುಧಾಕರ ಶೆಟ್ಟಿ ಉಪಸ್ಥಿತಿರಿದ್ದರು.

ಡಾ. ಕಿರಣ್ ಶೆಟ್ಟಿ ಸ್ವಾಗತಿಸಿದರು, ಚಂದ್ರಶೇಖರ ವಂದಿಸಿದರು. ಸುದೀಂದ್ರ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವತಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಹಸ್ತಾಂತರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿ ನೊಂದಾಯಿಸಿಕೊಂಡು ಚಿಕಿತ್ಸೆ, ಸಲಹೆ ಪಡೆದರು.

Exit mobile version