Kundapra.com ಕುಂದಾಪ್ರ ಡಾಟ್ ಕಾಂ

ಅ.10ರಿಂದ 19: ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅ.10ರಿಂದ-19ರ ತನಕ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ.ದೇವಳವು ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.

ಅ.18ರ ಮಹಾನವಮಿಯಂದು ಬೆಳಿಗ್ಗೆ ಚಂಡಿಕಾಯಾಗ, ಮಧ್ಯಾಹ್ನ 01:00ಕ್ಕೆ ರಥೋತ್ಸವ ನಡೆಯಲಿದೆ. ಅ.19ರ ವಿಜಯದಶಮಿಯಂದು ಬೆಳಿಗ್ಗೆ 4ರಿಂದ ವಿದ್ಯಾರಂಭ, ಅಪರಾಹ್ನ ನವಾನ್ನಪ್ರಾಶನ ಸಂಜೆ ೫.೩೦ಕ್ಕೆ ಶ್ರೀ ಮೂಕಾಂಬಿಕೆಯ ವಿಜಯೋತ್ಸವ ಜರುಗಲಿದೆ. ಪ್ರತಿದಿನ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದೇವಳದ ಸೌಪರ್ಣಿಕಾ ಮತ್ತು ಕಾಶೀ ಸ್ನಾನ ಘಟ್ಟದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆ, ಸಭಾಭವನದಲ್ಲಿ ಹೆಚ್ಚುವರಿ ಊಟದ ವ್ಯವಸ್ಥೆ ಜೊತೆಗೆ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಸಿಸಿ ಕ್ಯಾಮೆರಾ ಮೇಲೆ ಹದ್ದಿನ ಕಣ್ಗಾವಲು ಇಂತಹ ಹಲವಾರು ವಿಚಾರಗಳ ಬಗ್ಗೆ ಈಗಾಗಲೇ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ನವರಾತ್ರಿಯ ದಿನಗಳಲ್ಲಿ ಮದ್ಯಪಾನ ನಿಷೇದಿಸುವುದು, ದೇವಳದ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಸೇರಿದಂತೆ ಮುಂತಾದ ವಿಚಾರಗಳ ಬಗ್ಗೆಯೂ ವಿಶೇಷ ಮುತುವರ್ಜಿವಹಿಸಲಾಗಿದೆ. ಕುಂದಾಪ್ರ ಡಾಟ್ ಕಾಂ 

ಶ್ರೀ ಮೂಕಾಂಬಿಕೆಯ ದರ್ಶನ ಪಡೆಯಲು ಹಾಗೂ ಸೇವೆಗಾಗಿ ರಾಜ್ಯ, ಹೊರರಾಜ್ಯ, ದೇಶ-ವಿದೇಶದಿಂದ ಅಗಮಿಸುವ ಲಕ್ಷಾಂತರ ಭಕ್ತರಿಗೆ ಯಾವೂದೇ ರೀತಿಯ ತೊಂದರೆಯಾಗದಂತೆ ದೇವಳದ ವತಿಯಿಂದ ಸಕಲ ರೀತಿಯಲ್ಲಿ ಮೂಲಸೌಕರ್ಯವನ್ನು ಮಾಡಲಾಗಿದೆ. ದೇವಳದ ಸಿಬ್ಬಂದಿಗಳು, ಗ್ರಾಮಸ್ಥರು, ಸ್ಥಳೀಯಾಡಳಿತ ಕೂಡಾ ಉತ್ಸವದ ಕುರಿತು ವಿಶೇಷ ಕಾಳಜಿವಹಿಸಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೋಲೀಸ್ ಇಲಾಖೆ ಕೂಡಾ ಉತ್ಸವದ ಯಶಸ್ಸಿಗೆ ಕೈಜೋಡಿಸಿದ್ದು, ಬಿಗು ಬಂದೋಬಸ್ತಿನ ವ್ಯವಸ್ಥೆ ಮಾಡಲಾಗಿದೆ.

 

Exit mobile version