Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಭಾರತೀಯ ರೆಡ್ ಕ್ರಾಸ್ ನ ರಕ್ತನಿಧಿ ಕೇಂದ್ರ ಉದ್ಘಾಟನೆ

ಕುಂದಾಪುರ: ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಲಕ್ಷಾಂತರ ಮಂದಿಗೆ ನೆರವು ನೀಡುತ್ತಿರುವುದು ಕೆಲಸ ಶ್ಲಾಘನೀಯವಾದುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು

ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಬಳಿ ಭಾರತೀಯ ನೂತನವಾಗಿ ಆರಂಭಗೊಂಡ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಆರ್.ಎನ್. ಶೆಟ್ಟಿ ಸಂಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐ.ಆರ್.ಸಿ.ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಸಿ. ಸೋಮಶೇಖರ ಮಾತನಾಡಿ ಮಾನವೀಯತೆ, ನಿಷ್ಪಕ್ಷತೆ, ಸ್ವಾತಂತ್ರ್ಯ ಏಕತೆ ಮುಂದಾದ ಧೋರಣೆಗಳನ್ನಿಟ್ಟುಕೊಂಡು ನೊಂದವರಿಗೆ ಸ್ನೇಹದ ಹಸ್ತ, ಪ್ರಕೃತಿ ವಿಕೋಪವಾದಾಗ ನಿರಾಶ್ರಿತರಿಗೆ ಸ್ಪಂದಿಸುವ ಆಶಯದೊಂದಿಗೆ ರೆಡ್ ಕ್ರಾಸ್ ಕಾರ್ಯಾಚರಿಸುತ್ತಿದೆ. ಕುಂದಾಪುರದಲ್ಲಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಒಂದು ಮಾನವೀಯ ಕಾರ್ಯದ ಆವಿಷ್ಕಾರವಾದಂತಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಆರ್.ಸಿ.ಎಸ್ ರಾಜ್ಯ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಐ.ಆರ್.ಸಿ.ಎಸ್ ರಾಜ್ಯ ಘಟಕದ ಕಾರ್ಯದರ್ಶಿ ಎಸ್. ಅಶೋಕ್ ಕುಮಾರ್ ಶೆಟ್ಟಿ, ಐ.ಆರ್.ಸಿ.ಎಸ್ ಬ್ಲಡ್ ಡೊನೆಟ್ ಸಮಸ್ವಯಾಧಿಕಾರಿ ಎ.ಬಿ. ಶೆಟ್ಟಿ, ಕುಂದಾಪುರ ಪುರಸಭಾ ಅಧ್ಯಕ್ಷೆ ಕಲಾವತಿ, ಬ್ಲೊಸಮ್ ಆಸ್ಕರ್ ಫೆರ್ನಾಂಡಿಸ್, ಐ.ಆರ್.ಸಿ.ಎಸ್ ಕುಂಧಾಪುರ ಶಾಖೆಯ ಅಧ್ಯಕ್ಷೆ ಹಾಗೂ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್, ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಕುಂದಾಪುರ ರೆಡ್ ಕ್ರಾಸ್ ರಕ್ತನಿಧಿ ಘಟಕ ಸ್ಥಾಪನೆಗೆ ಸಂಸದರ ನಿಧಿಯಿಂದ ಅತಿ ಹೆಚ್ಚು ನೆರವು ನೀಡಿದ ಆಸ್ಕರ್ ಫೆರ್ನಾಂಡಿಸ್ ಹಾಗೂ ಇನ್ನಿತರ ದಾನಿಗಳನ್ನು ಗೌರವಿಸಲಾಯಿತು.

ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.
********************

Exit mobile version