Kundapra.com ಕುಂದಾಪ್ರ ಡಾಟ್ ಕಾಂ

ನಂದನವನ ಹಾಸ್ಟಿಟಾಲಿಟಿ & ಸರ್ವಿಸಸ್ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ’ವ್ಯಕ್ತಿ ತನ್ನ ವ್ಯವಹಾರದ ದೃಷ್ಟಿಯಿಂದ ಮಾಡಿದ ಕೆಲಸವಾದರೂ ಅದರಿಂದ ಜನರಿಗೆ ಅನುಕೂಲ, ಸಂತೋಷ ಆಗುವುದಾದರೆ ಆ ಕೆಲಸ ದೇವರ ಪೂಜೆಗೆ ಸಮನಾದುದು. ವೈ. ಬಾಬು ರಾವ್ ಕುಟುಂಬ ನಂದನವನದಲ್ಲಿ ನಿರ್ಮಿಸಿರುವ ಸಭಾ ಭವನ ಮತ್ತು ಹೋಟೆಲ್ ಸಮುಚ್ಚಯ ಗ್ರಾಮದ ಜನರಿಗೆ ನಗರದ ಸೌಲಭ್ಯ ಒದಗಿಸುವುದರಿಂದ ಅಂತಹ ಕೆಲಸದ ಸಾಲಿಗೆ ಸೇರುತ್ತದೆ’ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಉಪ್ಪುಂದದ ಅಂಬಾಗಿಲು ಸಮೀಪದ ನಂದನವನದಲ್ಲಿ ನವಿ ಮುಂಬಯಿಯ ಹೋಟೆಲ್ ಉದ್ಯಮವಾದ ’ವೈ. ಬಾಬು ರಾವ್ ಹಾಸ್ಪಿಟ್ಯಾಲಿಟಿ ಎಂಡ್ ಸರ್ವೀಸಸ್’ ನಿರ್ಮಿಸಿರುವ ದೇವಕಿ ಸಭಾ ಭವನ, ಪರಿಚಯ ವಸತಿ ಗೃಹ ಮತ್ತು ಪ್ರಕೃತಿ ರೆಸ್ಟೊರಂಟ್ ಸಮುಚ್ಛಯವನ್ನು ಬುಧವಾರ ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿದರು.

’ದೇವರ ಅನುಗ್ರಹ ಮತ್ತು ಸ್ವಪ್ರಯತ್ನ ವ್ಯಕ್ತಿಯ ಬದುಕಿನ ರಥದ ಎರಡು ಚಕ್ರಗಳು. ಅವು ಜತೆಯಲ್ಲಿ ಸಾಗಿದರಷ್ಟೆ ಯಶಸ್ಸಿನ ಯಾತ್ರೆಯ ಗುರಿ ತಲಪಲು ಸಾಧ್ಯ. ಇಲ್ಲಿ ನಿರ್ಮಿಸಿರುವ ಹೋಟೆಲನ್ನು ನಗರದಲ್ಲಿ ಮಾಡಿದ್ದರೆ ಹೆಚ್ಚು ದುಡಿಯಬಹುದಿತ್ತು. ಆದರೆ ತನ್ನ ಊರಿನ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಡಿರುವುದರಿಂದ ಭಗವಂತನಿಗೆ ಪ್ರಿಯವೆನಿಸಲಿದೆ’ ಎಂದು ಅವರು ಹೇಳಿದರು.

ಅತಿಥಿಗಳಾಗಿದ್ದ ಕೆರ್ಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮು, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ರಾಜಶೇಖರ ಕೆ. ಮೇಟಿ, ಕುಂದಾಪುರ ಗಾಣಿಗ ಸಂಘದ ಅಧ್ಯಕ್ಷ ಕೆ. ಕೊಗ್ಗ ಗಾಣಿಗ ಶುಭ ಹಾರೈಸಿದರು. ಮಹಾಲಕ್ಷ್ಮೀ ಸ್ವಾಗತಿಸಿದರು. ಗೋಪಾಲಕೃಷ್ಣ ವಂದಿಸಿದರು. ಮುರಳಿ ಕಡೆಕಾರ್ ನರ್ವಹಿಸಿದರು. ಹೋಟೆಲ್ ನಿರ್ಮಾಣದ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದ ಮಜೀದ್ ಗುಲ್ಬರ್ಗ, ಗಣೇಶ ರಾವ್, ಗಂಗಾಧರ ರಾವ್, ಬಿ. ಎಂ. ಭಟ್, ಪ್ರಭಾಕರ ಭಟ್, ಸುಧಾ, ಕುತ್ಪಾಡಿ ರಾಮಚಂದ್ರ ಗಾಣಿಗ, ಮೋಹನ ರಾವ್ ಅವರನ್ನು ಗೌರವಿಸಲಾಯಿತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಆಗಮಿಸಿ, ನೂತನ ಉದ್ಯಮಕ್ಕೆ ಶುಭ ಹಾರೈಸಿ ತೆರಳಿದರು.

ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದಲ್ಲಿ ಮಂಗಳೂರಿಗೆ ಬಂದು ನೇರಾಗಿ ನಂದನವನಕ್ಕೆ ಆಗಮಿಸಿದ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಬಾಬು ರಾವ್ ಕುಟುಂಬ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಶ್ರೀಗಳು ವಸತಿ ಗೃಹದಲ್ಲಿ ಸ್ನಾನಾದಿ ನಿತ್ಯಾಹ್ನಿಕಗಳನ್ನು ಪೂರೈಸಿ ಸ್ವಾಗತ ವಿಭಾಗದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಉಪಾಹಾರ ಸೇವನೆಯ ಬಳಿಕ ಉದ್ಘಾಟನೆ, ಆಶೀರ್ವಚನ ನಡೆಸಿ, ಗುರುವಾರ ದೆಹಲಿಗೆ ಹೋಗುವ ಮಾರ್ಗವಾಗಿ ಬೆಂಗಳೂರಿಗೆ ಮರಳಿದರು. ಸ್ವಾಮೀಜಿ ತಮ್ಮ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದುದಲ್ಲದೆ, ಸಮುಚ್ಛಯದಲ್ಲಿಯೇ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ, ಆಶೀರ್ವದಿಸಿರುವುದು ಬಾಬು ರಾವ್ ಕುಟುಂಬಕ್ಕೆ ಸಾರ್ಥಕ ಭಾವನೆ ನೀಡಿತು.

Exit mobile version