Kundapra.com ಕುಂದಾಪ್ರ ಡಾಟ್ ಕಾಂ

ದೀಪಗಳ ನಡುವಿನಲಿ ಮೂಡಿದ ನಗುವಿನ ಬೆಳಕು. ಡಿ.6 ರಿಂದ ಕಾರ್ಟೂನು ಹಬ್ಬ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಒಂದೇ ನೋಟಕ್ಕೆ ಮನತುಂಬಿದ ನಗು, ಒಮ್ಮೊಮ್ಮೆ ಸೆಡವು, ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿ ಗೊಂದು ಚಾಟಿ. ಜನಸಾಮಾನ್ಯರಿಗೆ ನಗುವಿನ ಚಟಾಕಿ. ವಾಸ್ತವದ ಅನಾವರಣ. ಕಾರ್ಟೂನಿಷ್ಠರಲ್ಲಿ ಕಲಾವಿದ, ಪತ್ರಕರ್ತ ಏಕಕಾಲದಲ್ಲಿ ಜಾಗೃತನಾಗಿರುತ್ತಾನೆ. ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ ಕಾರ್ಟೂನಿಷ್ಠರದ್ದು. ಇಂತಹ ಕಾರ್ಟೂನಿಷ್ಠ ರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಐದನೇ ವರ್ಷವೂ ಸಜ್ಜುಗೊಂಡಿದೆ.

ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ರಂಗು ರಂಗಾಗಿ ನಡೆಯುತ್ತಿದ್ದು ಈ ಭಾರಿಯೂ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ ಜರುಗಲಿದೆ.

ಹಬ್ಬದಲ್ಲಿ ಕಾರ್ಟೂನು ಪ್ರದರ್ಶನ, ಸ್ಕೂಲ್ ಟೂನ್ ಚಾಂಪಿಯನ್‌ಶಿಪ್ ಕಾರ್ಟೂನು ಸ್ವರ್ಧೆ, ಲೈವ್ ಕ್ಯಾರಿಕೇಚರಿಂಗ್, ಟೂನ್ ಟೈಂಪಾಸ್, ಓಪನ್ ಕಾರ್ಟೂನು ಕ್ಲಾಸುಗಳು, ಮಾಸ್ಟರ್ ಸ್ಟ್ರೋಕ್, ಸೆಲ್ಫಿ ಕಾರ್ನರ್, ಹೀಗೆ ನಾಲ್ಕು ದಿನವೂ ಕಾರ್ಟೂನು ಪ್ರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ರಂಜನೆ ಹಾಗೂ ಅರಿವಿಗಾಗಿ ಇದರ ಜೊತೆ ಜೊತೆಗೆ ಕಾರ್ಟೂನಿನ ಬಗೆಗೆ ಒಲವು ಮೂಡಿಸುವುದಕ್ಕಾಗಿ ಕಾರ್ಟೂನು ಕುಂದಾಪ್ರ ತಂಡ ಸಿದ್ದವಾಗಿದೆ.

ಸತೀಶ್ ಆಚಾರ‍್ಯರಿಗೆ ಅವರೇ ಸಾಟಿ:
ಕಲೆಯೊಂದಿಗಿನ ಒಡನಾಟ ಹವ್ಯಾಸ ವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ವೃತ್ತಿ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ‍್ಯ ಅವರು, ಇಂದು ತಾನು ಕಲಿತದ್ದನ್ನು ಜಗತ್ತಿಗೆ ಪಸರಿಸುವ ಹಾಗೂ ಮುಂದಿನ ಪೀಳಿಗೆಗೂ ಕಾರ್ಟೂನು ಕಲೆಯ ಕಸುವು ಒದಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್‌ಗಳಲ್ಲಿ ಅವರ ವ್ಯಂಗ್ಯಚಿಂತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. ಒಂದು ಹಂತದ ಯಶಸಸ್ಸು ತಲುಪಿದ ಬಳಿಕ ತನ್ನ ಹುಟ್ಟೂರಿಗೆ ಮರಳಿ ರೇಸ್ ಮುಂದುವರಿಸಿದ ಸತೀಶ್ ಅವರು, ತಾನು ಸಾಗುವ ಮಾರ್ಗದಲ್ಲಿ ತನ್ನವರನ್ನೂ ಕರೆದೊಯ್ಯುತ್ತಿದ್ದಾರೆ. ಕಾರ್ಟೂನಿಷ್ಠರನ್ನು ಒಟ್ಟಾಗಿಸಿ ಸತತ ಐದು ವರ್ಷದಿಂದ ಕಾರ್ಟೂನು ಹಬ್ಬ ಆಯೋಜಿಸಿ ಕುಂದಾಪುರ ಮಣ್ಣಿನಲ್ಲಿ ವ್ಯಂಗ್ಯಚಿತ್ರದ ಅಭಿರುಚಿಯನ್ನು ಹಾಗೆಯೇ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಕನಸುಗಳನ್ನು ಸಕಾರಗೊಳಿಸುವಲ್ಲಿ ಯಶವನ್ನೂ ಕಂಡಿದ್ದಾರೆ.

ಕಾರ್ಟೂನು ಹಬ್ಬ – 2018
ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಟೂನು ಕಲರವ ನಡೆಯಲಿದೆ. ಡಿಸೆಂಬರ್ 6ರ ಬೆಳಿಗ್ಗೆ 11 ಗಂಟೆಗೆ ಕಾರ್ಟೂನು ಹಬ್ಬವನ್ನು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಉದ್ಘಾಟಿಸಲಿದ್ದಾರೆ. ಅಂದು ಪತ್ರಿಕಾ ಛಾಯಾಗ್ರಾಹಕ ಯಜ್ಞ ಮಂಗಳೂರು, ಪತ್ರಕರ್ತರುಗಳಾದ ದಯಾಸಾಗರ್ ಚೌಟ, ಬಿ. ಎಂ. ಬಷೀರ್, ಯು. ಕೆ ಕುಮಾರನಾಥ್ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಮುಂಬೈನ ಕ್ರೀಡಾ ಛಾಯಾ ಪತ್ರಕರ್ತ ಸುರೇಶ್ ಕೆ. ಕರ್ಕೆರಾ ಅವರು ಸನ್ಮಾನಗೊಳ್ಳಲಿದ್ದಾರೆ. ವ್ಯಂಗ್ಯಚಿತ್ರಕಾರ ದಿ. ರಾವ್‌ಬೈಲ್ ಅವರಿಗೆ ಕ್ಯಾರಿಕೇಚರ್ ನಮನ ನಡೆಯಲಿದೆ. ಬಳಿಕ ಮುಂಬೈ ಬದುಕನ್ನು ಆಸ್ವಾದಿಸಿದ ಮುಂಬೈನಲ್ಲಿ ಬದುಕು ರೂಪಿಸಿಕೊಂಡ ಕಲಾವಿದರ, ಬರಹಗಾರರ, ಪತ್ರಕರ್ತರುಗಳಾದ ಗಿರಿಧರ್ ಕಾರ್ಕಳ, ಪಂಜು ಗಂಗೊಳ್ಳಿ, ಅವಿನಾಶ್ ಕಾಮತ್, ಸೋಮಶೇಖರ ಪಡುಕೆರೆ, ಶೇಖರ ಅಜೆಕಾರು, ಧನಂಜಯ ಗುರುಪುರ, ಕೇಶವ ಸಸಿಹಿತ್ಲು, ಸಂತೋಷ ಸಸಿಹಿತ್ಲು, ಸತೀಶ್ ಆಚಾರ‍್ಯ ಸೇರಿದಂತೆ ಹಲವರನ್ನೊಳಗೊಂಡ ಅನೌಪಚಾರಿಕ ಸಮ್ಮಿಲನ ನಡೆಯಲಿದೆ.

ಅಂದು ಸಂಜೆ 6ಕ್ಕೆ ಕುಂದಾಪ್ರ ಕನ್ನಡದ ಕಾಮಿಡಿ ಸ್ಟ್ಯಾಂಡಪ್ ಕಾಮಿಡಿ ಸ್ವರ್ಧೆ ’ನಿತ್ಕ ಕಾಮಿಡಿ ಕೂತ್ಕ ನಗಾಡಿ!’ ನಡೆಯಲಿದೆ. ಚೇತನ್ ನೈಲಾಡಿ ಅವರ ಸಾರಥ್ಯದಲ್ಲಿ ಸೋಮಶೇಖರ ಪಡುಕೆರೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಡಿ. 7ರ ಬೆಳಿಗ್ಗೆ ಹ್ಯಾಶ್‌ಟ್ಯಾಗ್ ಹರಟೆ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಆಯುಕ್ತ ಭೂಬಾಲನ್ ಟಿ. ಉದ್ಘಾಟಿಸಲಿದ್ದಾರೆ. ಮಾಜಿ ಪತ್ರಕರ್ತ ರಾಜಾರಾಂ ತಲ್ಲೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪತ್ರಕರ್ತರಾದ ಅಂಬರೀಶ್ ಭಟ್, ಶಶಿಧರ ಹೆಮ್ಮಾಡಿ, ಶ್ರೀಕಾಂತ್ ಶೆಟ್ಟಿ, ರಾಜಕೀಯ ನಾಕರಾದ ಕಿಶೋರ್ ಕುಮಾರ್ ಕುಂದಾಪುರ, ವಿಕಾಸ್ ಹೆಗ್ಡೆ ಅವರುಗಳು ಸೋಶಿಯಲ್ ಮೀಡಿಯಾ, ಸುಳ್ಳು ಸುದ್ದಿ, ವೈರಲ್ ಸೊಂಕು ಮೊದಲಾದವುಗಳ ಬಗೆಗೆ ಚರ್ಚೆ ನಡೆಸಲಿದ್ದಾರೆ. ವ್ಯಂಗ್ಯಚಿತ್ರಕಾರ ಜೀವನ್ ಶೆಟ್ಟಿ ಸನ್ಮಾನಗೊಳ್ಳಲಿದ್ದು ಅವಿನಾಶ್ ಕಾಮತ್ ಉಡುಪಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ’ಕಾರ್ಟೂನು ಕಲಿ’ ಕಾರ್ಯಾಗಾರ ನಡೆಯಲಿದೆ. ಈ ಮೊದಲೇ ನೊಂದಾಯಿಸಿದ ಆಸಕ್ತ ೨೫ ಮಂದಿಗೆ ಸತೀಶ್ ಆಚಾರ್ಯ ಅವರ ಸಾರಥ್ಯದಲ್ಲಿ ಕಾರ್ಯಾಗಾರ ನಡೆಯಲಿದೆ.

ಡಿ.8ರ ಮಧ್ಯಾಹ್ನ ಉದಯೋನ್ಮಕ ವ್ಯಂಗ್ಯಚಿತ್ರಕಾರರಿಗೆ ಆಯೋಜಿಸಲಾಗುವ ಸ್ವರ್ಧೆ ’ಕಾರ್ಟೂನು ಮೊಗ್ಗು’ ಉದ್ಘಾಟನೆ ಗೊಳ್ಳಿದ್ದು, ಸಮಾಜ ಸೇವಕ ದತ್ತಾನಂದ ಗಂಗೊಳ್ಳಿ ಉದ್ಘಾಟಿಸಲಿದ್ದಾರೆ. ಪ್ರಾಧ್ಯಾಪಕಿ ರೇಖಾ ಬನ್ನಾಡಿ, ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ಉಪಸ್ಥಿತರಿರಲಿದ್ದಾರೆ. ಕಲಾ ಶಿಕ್ಷಕ ಕಾಳಪ್ಪ ಬಡಿಗೇರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಈ ಸ್ವರ್ಧೆಯಲ್ಲಿ ಸ್ಥಳದಲ್ಲಿಯೇ ವಿಷಯ ನೀಡಿ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಖ್ಯಾತ ಕಾರ್ಟೂನಿಷ್ಠ್ ಮಾಯಾ ಕಾಮತ್ ಸ್ಮರಣಾರ್ಥ ಈ ಕಾರ್ಟೂನು ಸ್ವರ್ಧೆಯನ್ನು ಆಯೋಜಿ ಸಲಾಗುತ್ತಿದೆ.

ಡಿ.9ರ ಬೆಳಿಗ್ಗೆ ಮಾಸ್ಟರ್ ಸ್ಟ್ರೋಕ್ಸ್ ಕಾರ್ಯಕ್ರಮ ಜರುಗಲಿದ್ದು ಹರಿಣಿ, ರಘುಪತಿ ಶೃಂಗೇರಿ, ಚಂದ್ರ ಗಂಗೊಳ್ಳಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ರಂಗ ಅಧ್ಯಯನ ಕೇಂದ್ರದ ವಸಂತ ಬನ್ನಾಡಿ ಇರಲಿದ್ದಾರೆ. ಅಂದು ವ್ಯಂಗ್ಯಚಿತ್ರಕಾರರಾದ ನಟರಾಜ ಅರಳಸುರಳಿ, ಏಕನಾಥ್ ಬೊಂಗಾಳೆ, ಶೈಲೇಶ್ ಉಜಿರೆ ಸನ್ಮಾನಗೊಳ್ಳಲಿದ್ದಾರೆ.

ಅದೇ ದಿನ ಸಂಜೆ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದ್ದು ಅತಿಥಿಗಳಾಗಿ ಮನೋವೈದ್ಯ ಡಾ. ಪಿ.ವಿ ಭಂಡಾರಿ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಡಾ. ವೆಂಟರಾಮ ಉಡುಪ, ಉದ್ಯಮಿ ಬೀಜಾಡಿ ನರಸಿಂಹ, ವೈದ್ಯ ಡಾ. ಶ್ರೀಕಾಂತ್ ಶೆಟ್ಟಿ, ಪತ್ರಕರ್ತ ಲಕ್ಷ್ಮೀ ಮಚ್ಚಿನ್ ಇರಲಿದ್ದಾರೆ. ಅಂದು ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಕುಂದಾಪ್ರ ಕನ್ನಡ ಯುವ ಹಾಸ್ಯ ಕಿಲಾಡಿ ಚೇತನ್ ನೈಲಾಡಿ ಕಾಮಿಡಿ ಮಾಡಲಿದ್ದಾರೆ.

ಕಾರ್ಟೂನಿಷ್ಠರ ತವರು
ಕುಂದಾಪುರ ಕಾರ್ಟೂನಿಷ್ಠರ ತವರು ಎಂದೇ ಗುರುತಿಸಿಕೊಂಡಿದೆ. ದೇಶದ ಹಲವು ಖ್ಯಾತನಾಮ ಕಾರ್ಟೂನಿಷ್ಠರುಗಳು ಕುಂದಾಪುರ ಮೂಲದವರು ಎಂಬುದು ಕುಂದಾಪುರಿಗರಿಗೆ ನಿಜಕ್ಕೂ ಹೆಮ್ಮೆ.

ಎಲ್ಲವೂ ಭಿನ್ನ:
ಕಾರ್ಟೂನು ಹಬ್ಬ ಸತೀಶ್ ಆಚಾರ್ಯ ಅವರ ಕನಸಿನ ಕೂಸು. ಇಲ್ಲಿ ಎಲ್ಲವೂ ಭಿನ್ನ. ಕುಂದಾಪುರದ ಕಲಾಮಂದಿರದ ಒಳಹೊಕ್ಕಿದವರಿಗೆ ಕಾರ್ಟೂನು ಲೋಕದಲ್ಲಿ ಸುತ್ತಿ ಬಂದ ಅನುಭವವಾಗುವುದು ಗ್ಯಾರೆಂಟಿ. ಕಾರ್ಟೂನು ಹಬ್ಬದ ಆಮಂತ್ರಣದಿಂದ ಕಾರ್ಟೂನು ಪ್ರದರ್ಶನ, ಕಾರ್ಟೂನು ಪುಸ್ತಕಗಳು, ಸಂದೇಶ ಹೊತ್ತ ಹೊರ್ಡಿಂಗ್, ಓಪನ್ ಕ್ಯಾನ್ವಾಸ್, ಪೇಪರ್, ಸ್ಮರಣಿಕೆ ಹೀಗೆ ಕಾರ್ಟೂನು ಹಬ್ಬದಲ್ಲಿ ಬಳಸುವ ಪೇಪನಿಂದ ಹಿಡಿದು ಎಲ್ಲವೂ ಭಿನ್ನ ಹಾಗೂ ಸದಾ ಮನಸ್ಸಿನಲ್ಲಿ ಮುದ್ರೆಯೊತ್ತುವ ಮಾದರಿ ಕಾಣಸಿಗುತ್ತವೆ.

Exit mobile version