Kundapra.com ಕುಂದಾಪ್ರ ಡಾಟ್ ಕಾಂ

ವೈದ್ಯ, ರೋಗಿಯ ಸಂಬಂಧ ಪವಿತ್ರವಾದುದು

ಕುಂದಾಪುರ: ಪ್ರತಿಯೊಬ್ಬ ವೈದ್ಯರೂ ತಾನು ಚಿಕಿತ್ಸೆ ನಡೆಸುತ್ತಿರುವ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ರೋಗಿಗೆ ಹಾನಿ ಮಾಡಿ ದುರ್ಲಾಭ ಪಡೆಯಲು ಯಾವ ವೈದ್ಯನೂ ಬಯಸುವುದಿಲ್ಲ. ಆದರೂ ಪರಿಸ್ಥಿತಿಯ ವ್ಯತ್ಯಾಸಗಳಿಂದಾಗಿ ಹೆಚ್ಚಾಗಿ ವೈದ್ಯರೇ ನಿಂದನೆ ಗೊಳಗಾಗಬೇಕಾಗುತ್ತದೆ. ಈ ಪವಿತ್ರ ಸಂಬಂಧ ಸಡಿಲ ವಾಗುತ್ತಿರುವುದರಿಂದ ಈಗೀಗ ವೈದ್ಯರನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇಂದಿಗೂ ಹದಗೆಟ್ಟಿಲ್ಲ ಎಂದು ಕುಂದಾಪುರದ ಶ್ರೀ ದೇವಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ. ರವೀಂದ್ರ ರಾವ್‌ ಹೇಳಿದರು.

ಅವರು ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ ಉಪ್ಪಿನಕುದ್ರು ದಿ| ವೇದಮೂರ್ತಿ ಸದಾಶಿವ ಹೊಳ್ಳ ದಂಪತಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಂಸ್ಮರಣ ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಸಮ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.

ಅವರ ಪತ್ನಿ ಡಾ| ಭವಾನಿ ರಾವ್‌ ಅವರನ್ನು ಸಮ್ಮಾ¾ನಿಸಿ ಗೌರವಿಸಲಾಯಿತು. ವೈದ್ಯ ದಂಪತಿಯನ್ನು ಪ್ರತಿಷ್ಠಾನದ ಪರವಾಗಿ ಸಮ್ಮಾ¾ನಿಸಿದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಳದ ಆಡಳಿತ ಧರ್ಮದರ್ಶಿ ವೇದಮೂರ್ತಿ, ಎಚ್‌. ರಾಮಚಂದ್ರ ಭಟ್‌, ಪ್ರತಿಷ್ಠಾನದ ಆಶ್ರಯದಲ್ಲಿ ಸಮಾಜ ಸೇವೆ ಮತ್ತು ತಮ್ಮ ತಂದೆ ತಾಯಿಯರ ಸಂಸ್ಮರಣೆ ನಡೆಸುತ್ತಿರುವ ಸಂಚಾಲಕ ವೆಂಕಟರಮಣ ಹೊಳ್ಳರ ಕಾರ್ಯಗಳನ್ನು ಶ್ಲಾಘಿಸಿದರು.

ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಯು. ಭಾಸ್ಕರ ಕಾಮತ್‌ ಮತ್ತು ತಾಲೂಕು ಕ.ಸಾ.ಪ. ಕಾರ್ಯದರ್ಶಿ ಕೆ. ಗಣಪತಿ ವೈದ್ಯ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಪ್ರತಿಷ್ಠಾನದ ಸವಿನೆನಪಿಗಾಗಿ ಹೊರತಂದ ಗಾಯಕ ಗಣೇಶ್‌ ಗಂಗೊಳ್ಳಿ ರಚಿತ ಬಾ ಮಗುವೆ ಶಾಲೆಗೆ ಧ್ವನಿ ಮುದ್ರಿಕೆಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ, ಪ್ರತಿಷ್ಠಾನದ ಅಧ್ಯಕ್ಷ ಯು. ರಾಮಕೃಷ್ಣ ಐತಾಳ ಬಿಡುಗಡೆಗೊಳಿಸಿದರು.

ಸಂಚಾಲಕ, ಕ.ಸಾ.ಪ. ಕಾರ್ಯಕಾರಿ ಸಮಿತಿ ಸದಸ್ಯ ಯು. ವೆಂಕಟರಮಣ ಹೊಳ್ಳ ಸ್ವಾಗತಿಸಿ, ಪ್ರಸ್ತಾನೆಗೈದರು. ಸುಮುಖ ಮತ್ತು ಸುಷೇಣ ಫಲ ತಾಂಬೂಲ ನೀಡಿ ಅತಿಥಿಗಳನ್ನು ಗೌರವಿಸಿದರು. ಪ್ರತಿಷ್ಠಾನ ಕೊಡಮಾಡಿದ ಕೊಡುಗೆಯನ್ನು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಅಧ್ಯಾಪಕ ನಾಗೇಶ್‌ ಶಾನುಭಾಗ್‌ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ಪಿ. ಪ್ರಭಾಕರ ಮಧ್ಯಸ್ಥ ವಂದಿಸಿದರು. ನಂತರ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಗಣೇಶ್‌ ಗಂಗೊಳ್ಳಿಯವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Exit mobile version