Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಲೋಕಸಭಾ ಸದಸ್ಯ ಬಿ. ವೈ ರಾಘವೇಂದ್ರ ಅವರ ನೂತನ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳು ಸಮಪರ್ಕವಾಗಿ ಜನರಿಗೆ ತಲುಪಬೇಕಾದರೆ ಅಧಿಕಾರಿಗಳ ಸ್ಪಂದನೆ ಮುಖ್ಯವಾಗಿರುತ್ತದೆ. ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಸಾಕಷ್ಟು ಅನುಭವ ಇರುವ ಸಂಸದರು ಜನಸ್ಪಂದನೆಯ ಮೂಲಕ ಇನ್ನಷ್ಟು ಸೇವೆ ನೀಡಲು ಅವಕಾಶ ದೊರೆತಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರ ನೂತನ ಕಛೇರಿ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬೈಂದೂರು ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕಡಲ್ಕೊರೆತ, ಮರಳು ಸಮಸ್ಯೆ, ಡೀಮ್ಡ್ ಪಾರೆಸ್ಟ್ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಕ್ಕುಪತ್ರ ದೊರಕದಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪಕ್ಷಾತೀತವಾಗಿ ಜನರ ಸಮಸ್ಯೆ ಅರಿಯಲು ಇಲ್ಲಿ ಕಛೇರಿ ತೆರೆಯಲಾಗಿದ್ದು, ಇದು ಜನಸಾಮಾನ್ಯರ ಕಛೇರಿಯಾಗಿದೆ. ಸಂಸದರ ಕಛೇರಿ ಮೂಲಕ ಜನರಿಗೆ ಇನ್ನಷ್ಟು ಸೇವೆ ದೊರಕಿಸಿಕೊಡುತ್ತೇನೆ. ಕೇಂದ್ರ ಸರಕಾರದಿಂದ ದೊರೆಯುವ ಯೋಜನೆಗಳನ್ನು ಬಂದೂರು ಕ್ಷೇತ್ರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಹೆಚ್ಚಿನ ಆದ್ಯತೆ ನೀಡುತ್ತೇನೆ. ಜನರಿಗೆ ಅನುಕೂಲವಾಗುವಂತೆ ಇಲ್ಲಿನ ಮೂಕಾಂಬಿಕಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರಿಗೆ ಮನವಿ ಮಾಡಲಾಗುವುದು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಡೆತಡೆಯ ಬಗ್ಗೆಯೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೆ ತಂದು, ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ರುದ್ರೆಗೌಡ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಜಿಪಂ ಸಿಇಒ ಸಿಂಧೂ ರೂಪೇಶ್, ಎಸಿ ಭೂಬಾಲನ್, ತಾಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ನಾರಾಯಣ ಗುಜ್ಜಾಡಿ, ಇಓ ಕಿರಣ ಪಡ್ನವಿಸ್, ಡಿವೈಎಸ್‌ಪಿ ಬಿ.ಪಿ ದಿನೇಶ ಕುಮಾರ್, ಕುಂದಾಪುರ ತಹಶೀಲ್ದಾರ ತಿಪ್ಪೇಸ್ವಾಮಿ, ತಾಪಂ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಬೈಂದೂರು ತಹಶೀಲ್ದಾರ ಕಿರಣ ಜಿ. ಗೌರಯ್ಯ ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು. ಬಿಇಒ ಓ ಆರ್. ಪ್ರಕಾಶ ವಂದಿಸಿದರು.

Exit mobile version