Kundapra.com ಕುಂದಾಪ್ರ ಡಾಟ್ ಕಾಂ

ಹ್ಯಾಪಿ ಇಎಂಐ ಸ್ಟಾರ್ಟಪ್‌ಗೆ ಜಾಗತಿಕ ಮನ್ನಣೆ. ವಿಶ್ವದ ಅಗ್ರ ನವೋದ್ಯಮದಲ್ಲಿ 30ನೇ ಸ್ಥಾನ

ಕುಂದಾಪ್ರ ಡಾಟ್ ಕಾಂ’ ಸುದ್ದಿ
ನ್ಯೂಯಾರ್ಕ್: ಒನ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಗ್ಲೋಬಲ್ ಕೆ50 ಸಮಾವೇಶದಲ್ಲಿ ವಿಶ್ವದ ಅಗ್ರ 50 ನವೋದ್ಯಮದ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಬೆಂಗಳೂರು ಮೂಲದ ಹ್ಯಾಪಿ ಇಎಂಐ ಸ್ಟಾರ್ಟಪ್ ಹಣಕಾಸು ವಿಭಾಗದಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನ ಸುಹಾಸ್ ಗೋಪಿನಾಥ್ ಹ್ಯಾಪಿ ಇಎಂಐ ಸ್ಟಾರ್ಟಪ್‌ನ ಸಂಸ್ಥಾಪಕರಾಗಿದ್ದಾರೆ. ಹೊಸ ತಂತ್ರಜ್ಞಾನಗಳ ಮೂಲಕ ಸದಾ ನವೀನ ಪ್ರಯೋಗಗಳಿಗೆ ಮುಂದಾಗುವ ಯುವ ಉದ್ಯಮಿ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದಾರೆ.

ಎಲ್ಲರಿಗೂ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರಕಿಸಿಕೊಡುವುದು ಈ ಬಾರಿಯ ಕೈರೋಸ್ ಜಾಗತಿಕ ಸಮಾವೇಶದ ಧ್ಯೇಯವಾಗಿತ್ತು. ಹ್ಯಾಪಿಇಎಂಐ ನವೋದ್ಯಮ ಈ ಧ್ಯೇಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಂದು ನಿಮಿಷದಲ್ಲಿ ಸಾಲ ಸೌಲಭ್ಯ ಸಿಗಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಹ್ಯಾಪಿ ಇಎಂಐಗೆ ಅಗ್ರ 50 ನವೋದ್ಯಮದಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು.

ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಎಂಬ ವಿಭಾಗಗಳಲ್ಲಿ ಹೊಸದಾಗಿ ಸ್ಥಾಪನೆಗೊಂಡು ವಿಶಿಷ್ಟ ಛಾಪು ಮೂಡಿಸುತ್ತಿರುವ ನವೋದ್ಯಮಗಳನ್ನು ಜಾಗತಿಕ ಅಗ್ರ 50 ನವೋದ್ಯಮಗಳ ಮನ್ನಣೆಗೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ನವೋದ್ಯಮಗಳು ವಿಶ್ವದ ಪ್ರಭಾವಿ 150 ಸಿಇಒಗಳು, ಕೈಗಾರಿಕಾ ಮುಖ್ಯಸ್ಥರು, ಮಾಧ್ಯಮ ಮತ್ತು ಜಾಗತಿಕ ವಿಸಿಗಳ ಸಮ್ಮುಖದಲ್ಲಿ ಕಂಪನಿಯ ಧ್ಯೇಯೋದ್ದೇಶ ಮತ್ತು ಕಾರ್ಯನಿರ್ವಹಣೆ ಕುರಿತ ವಿವರಗಳನ್ನು ಒದಗಿಸಬೇಕು. ಯಾವುದಾದರೂ ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆ ಪಡೆಯುವಾಗ ಗ್ರಾಹಕರು ಎದುರಿಸ ಬಹುದಾದ ಇಕ್ಕಟ್ಟುಗಳನ್ನು ಪರಿಹರಿಸಲು ಸಂಸ್ಥೆಗಳು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕಾಗುತ್ತದೆ. ಈ ಮಾಹಿತಿಗಳು ತೃಪ್ತಿಕರವಾಗಿದ್ದರಷ್ಟೇ ಜಾಗತಿಕ ಅಗ್ರ 50 ನವೋದ್ಯಮಗಳಲ್ಲಿ ಒಂದೆಂದು ಆಯ್ಕೆ ಮಾಡಲಾಗುತ್ತದೆ. ಇದುವರೆಗೂ ಈ ಮನ್ನಣೆ ಪಡೆದಿರುವ ನವೋದ್ಯಮಗಳಿಗೆ 1 ಶತಕೋಟಿ ಡಾಲರ್‌ವರೆಗೆ ಬಂಡವಾಳ ಕ್ರೋಡಿಕರಿಸಲು ಅನುಕೂಲವಾಗಿದೆ ಎಂದು ಹ್ಯಾಪಿ ಇಎಂಐ ಪ್ರತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಕೈರೋಸ್ ಸೊಸೈಟಿ ಜಾಗತಿಕ ಯುವ ಉದ್ಯಮಿಗಳ ಸಮುದಾಯವಾಗಿದೆ. ಜಾಗತಿಕವಾಗಿ ಬಹುದೊಡ್ಡ ಸವಾಲುಗಳನ್ನು ಸುಲಭವಾಗಿ ಪರಿಹರಿಸುವ ಉದ್ದೇಶ ಈ ಸಮುದಾಯದ್ದಾಗಿದೆ. ಪೀಟರ್ ಡಯಾಮಂಡಿಸ್, ರಿಚರ್ಡ್ ಬ್ರಾನ್ಸನ್, ಬಿಲ್ ಗೇಟ್ಸ್ ಮತ್ತು ಬಿಲ್ ಕ್ಲಿಂಟನ್ ಈ ಸೊಸೈಟಿಯ ಅಂತಾರಾಷ್ಟ್ರೀಯ ಮೆಂಟರ್‌ಗಳಾಗಿದ್ದಾರೆ. 10 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆ ಪ್ರತಿವರ್ಷ ನ್ಯೂಯಾರ್ಕ್‌ನಲ್ಲಿ ಜಾಗತಿಕ ಸಮಾವೇಶ ಆಯೋಜಿಸುತ್ತದೆ.

‘ಕೈರೋಸ್ ಸೊಸೈಟಿಯ ಕೆ50 ಪಟ್ಟಿಯಲ್ಲಿ ಹ್ಯಾಪಿಇಎಂಐಗೆ 30ನೇ ಸ್ಥಾನ ದೊರೆತಿರುವುದು ಹೆಮ್ಮೆಯ ಸಂಗತಿ. ಎಲ್ಲರಿಗೂ ಸುಲಭವಾಗಿ ಸಾಲಸೌಲಭ್ಯ ದೊರೆಯುವಂತೆ ಮಾಡುವ ನಮ್ಮ ಧ್ಯೇಯೋದ್ದೇಶಕ್ಕೆ ಅಗತ್ಯ ಪ್ರೋತ್ಸಾಹ ದೊರೆತಂತಾಗಿದೆ’ ಎಂದು ವಿಆರ್‌ಎಲ್ ಮೀಡಿಯಾ ಎಂಡಿ ಮತ್ತು ಹ್ಯಾಪಿ ಇಎಂಐ ಸಹಸಂಸ್ಥಾಪಕ ಆನಂದ ಸಂಕೇಶ್ವರ ಹರ್ಷ ವ್ಯಕ್ತಪಡಿಸಿದರು. ‘ಹ್ಯಾಪಿಇಎಂಐ ಕ್ರೆಡಿಟ್‌ಕಾರ್ಡ್ ಪರಿಕಲ್ಪನೆಗೆ ಹೊಸ ಭಾಷ್ಯ ಬರೆಯಲು ಮುಂದಾಗಿದೆ. ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳ ಸಾಲ ಸೌಲಭ್ಯ ಒದಗಿಸುವ ಮೂಲಕ ಯುವಜನತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ ಎಂದು ಹ್ಯಾಪಿ ಇಎಂಐ ಸಂಸ್ಥಾಪಕ ಸುಹಾಸ್ ಗೋಪಿನಾಥ್ ತಿಳಿಸಿದ್ದಾರೆ.

ಹ್ಯಾಪಿ ಇಎಂಐ ಸ್ಟಾರ್ಟಪ್ ಬಗ್ಗೆ:
ವಿಆರ್‌ಎಲ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮತ್ತು ಗ್ಲೋಬಲ್ಸ್ ಇಂಕ್‌ನ ಮಾಜಿ ಸಿಇಒ ಸುಹಾಸ್ ಗೋಪಿನಾಥ್ ಒಟ್ಟಾಗಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಡಿಜಿಟಲ್ ಕ್ರೆಡಿಟ್‌ಕಾರ್ಡ್ ಸೌಲಭ್ಯದ ಮೂಲಕ ಆನ್‌ಲೈನ್ ಅಥವಾ ಆ್ಲೈನ್‌ನಲ್ಲಿ ಮೊಬೈಲ್ ೆನ್, ಗ್ರಾಹಕರ ಬಳಕೆಯ ವಸ್ತುಗಳು, ಆಯ್ದ ಆರೋಗ್ಯಸೇವೆಗಳು, ಗೃಹಾಲಂಕಾರ ಮತ್ತು ಕಾರುಗಳ ಅಲಂಕಾರಿಕ ವಸ್ತುಗಳ ಖರೀದಿಗೆ 3ರಿಂದ 6 ತಿಂಗಳ ಅವಧಿಗೆ ಸುಲಭ ಕಂತುಗಳ ಸಾಲ ನೀಡುತ್ತದೆ. 10 ನಗರಗಳಲ್ಲಿರುವ 2ಸಾವಿರಕ್ಕೂ ಅಧಿಕ ಅಂಗಡಿ ಮುಂಗಟ್ಟುಗಳಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದು. ಪ್ಯಾನ್‌ಕಾರ್ಡ್ ಮತ್ತು ಆಧಾರ್‌ಕಾರ್ಡ್ ಸಲ್ಲಿಸಿದರೆ 18ರಿಂದ 55 ವರ್ಷ ವಯೋಮಿತಿಯವರಿಗೆ ಡಿಜಿಟಲ್ ಕ್ರೆಡಿಟ್‌ಕಾರ್ಡ್ ದೊರೆಯುತ್ತದೆ. ಸಿಬಿಲ್ ಬದಲಿಗೆ ಹ್ಯಾಪಿ ಇಎಂಐ ನವೋದ್ಯಮ ತನ್ನದೇ ಆದ ಮೌಲ್ಯಮಾಪನ ಪದ್ಧತಿಯಲ್ಲಿ ಗ್ರಾಹಕರ ಅರ್ಹತೆಯನ್ನು ನಿಗಿದಿಪಡಿಸಿಕೊಳ್ಳುತ್ತದೆ.

Exit mobile version