Kundapra.com ಕುಂದಾಪ್ರ ಡಾಟ್ ಕಾಂ

ಜ.4 ರಿಂದ 6: ಕುಂದಾಪುರದಲ್ಲಿ ಅಭಿಯಾನ ರೋಟರಿ ಜಿಲ್ಲಾ ಸಮ್ಮೇಳನ

ಕುಂದಾಪ್ರ ಡಾಟ್ ಕಾಂ’ ಸುದ್ದಿ
ರೋಟರಿ ಜಿಲ್ಲಾ ಕಾನ್ಪರೆನ್ಸ್ ಕಮಿಟಿ ಹಾಗೂ ರೋಟರಿ ಜಿಲ್ಲೆ 3182 ಸಾರಥ್ಯದಲ್ಲಿ ಅಭಿಯಾನ ರೋಟರಿ ಜಿಲ್ಲಾ ಸಮ್ಮೇಳನ ಜನವರಿ 4, 5, ಹಾಗೂ 6ರಂದು ಕೋಟೇಶ್ವರದ ಯುವ ಮೆರೀಡಿಯನ್ ಕನ್ವೆನ್‌ಕ್ಷನ್ ಸೆಂಟರ್‌ನಲ್ಲಿ ಜರುಗಲಿದೆ ಎಂದು ರೋಟರಿ 3182 ಜಿಲ್ಲಾ ಗವರ್ನರ್ ಅಭಿನಂದನ್ ಎ. ಶೆಟ್ಟಿ ತಿಳಿಸಿದ್ದಾರೆ.

 

ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಸಂಸ್ಥೆಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ಸೇರಿದಂತೆ ಸಾಮಾಜಿಕ ಬದ್ಧತೆಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ವರ್ಷದಲ್ಲಿ 3182ರೋಟರಿ ಜಿಲ್ಲೆಯಲ್ಲಿ ಮೇಕ್ ರೋಡ್ ಸೇಫ್ ಅಭಿಯಾನವನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆ, ಹ್ಯಾಪಿ ಸ್ಕೂಲ್ ಯೋಜನೆಯಡಿಯಲ್ಲಿ 60 ಶಾಲೆಗಳನ್ನು ದತ್ತು ಪಡೆದು ಈ ಲರ್ನಿಂಗ್ ಕಿಟ್, ವಾಶಿಂಗ್ ಬೇಸಿನ್ ಒದಗಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮವನ್ನು ಸ್ವಹಿತ ಮೀರಿದ ಸೇವೆ ಎಂಬ ರೋಟರಿಯ ಮೂಲ ತತ್ವದಡಿಯಲ್ಲಿ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ರೋಟರಿ ಸಮ್ಮೇಳನದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮಾತನಾಡಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರೋಟರಿ ಸಮ್ಮೇಳನದಲ್ಲಿ ಉದ್ಘಾಟನೆಯಾದಿಯಾಗಿ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಜ.೪ರ ಸಂಜೆ ನಡೆಯುವ ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರ್ಗಿ ಉದ್ಘಾಟಿಸಲಿದ್ದಾರೆ. ಜ.೫ರ ಬೆಳಿಗ್ಗೆ ಸ್ವಾಮಿ ಸುಖಭೋದಾನಂದ ಅವರು ಸಮ್ಮೇಳನ್ನು ಉದ್ಘಾಟಿಸಲಿದ್ದು, ಅದಕ್ಕೂ ಪೂರ್ವದಲ್ಲಿ ಮೆರವಣಿಗೆ, ಧ್ವಜಾರೋಹಣ ನಡೆಯಲಿದೆ. ಪಿಡಿಜಿ ಭರತ್ ರೆಡ್ಡಿ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ನಡೆಯುವ ವಿಚಾರಗೋಷ್ಠಿಯಲ್ಲಿ ರಾಜಕೀಯ ಮತ್ತು ಸಮಾಜ ಎಂಬ ವಿಷಯದ ಕುರಿತು ವಿ.ಆರ್ ಸುದರ್ಶನ್ ಮಾತನಾಡಲಿದ್ದಾರೆ. ಬಳಿಕ ಸರ್ವಿಸ್-ಎ ವೇ ಆಫ್ ಲೈಫ್ ವಿಷಯದ ಕುರಿತು ಎಂಆರ್‌ಪಿಲ್ ಹ್ಯುಮನ್ ರಿಸೋರ್ಸ್ ವಿಭಾಗದ ಚೀಫ್ ಜನರಲ್ ಮ್ಯಾನೆಜರ್ ಲಕ್ಷ್ಮೀ ಎಂ. ಕುಮಾರನ್ ಮಾತನಾಡಲಿದ್ದಾರೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ರಜನಿ ಅಶೋಕ್ ಪೈ ಅವರನ್ನು ಸನ್ಮಾನಿಸಲಾಗುತ್ತದೆ. ಮಧ್ಯಾಹ್ನ ೨.೩೦ಕ್ಕೆ ಧಾರವಿ ಸ್ಮಂ ಹುಡುಗರಿಂದ ಧಾರವಿ ರಿಲೋಡೆಡ್ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಸಿನೆಮಾ ರಂಗ ಮತ್ತು ಜೀವನ ವಿಷಯವಾಗಿ ರಮೇಶ್ ಭಟ್, ರಿಷಬ್ ಶೆಟ್ಟಿ, ಪ್ರಮೋದ್ ಮಾತನಾಡಲಿದ್ದಾರೆ. ಬಳಿಕ ಅಜೆಯ್ ವಾರಿಯರ್ ಮತ್ತು ತಂಡ ಹಾಗೂ, ಭಾರ್ಗವಿ ಸಾಂಸ್ಕೃತಿಕ ತಂಡದಿಂದ ಕಾರ್ಯಕ್ರಮ ಜರುಗಲಿದೆ. ಜ.೬ರಂದು ನಡೆಯುವ ವಿಚಾರಗೋಷ್ಠಿಯಲ್ಲಿ ಮಹಿಳೆ ಮತ್ತು ಸ್ಥೂರ್ತಿ ವಿಚಾರವಾಗಿ ಐಪಿಎಸ್ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಲಿದ್ದಾರೆ. ನಾಗರಿಕರು ಮತ್ತು ರಸ್ತೆ ಸುರಕ್ಷತೆ ವಿಷಯವಾಗಿ ಕೆ. ಅಣ್ಣಾಮಲೈ, ಸಮಾಜದಲ್ಲಿ ಕಾನೂನಿನ ಪರಿಣಾಮ ವಿಷಯವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂದೇಶ್ ಚೌಟಾ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಕಾರ್ಯದರ್ಶಿ ವಿವಿನ್ ಕ್ರಾಸ್ಟಾ, ಜಿಲ್ಲಾ ರೋಟರಿ ಕಾರ್ಯದರ್ಶಿ ಮೊಳಹಳ್ಳಿ ಗಣೇಶ್ ಶೆಟ್ಟಿ, ರೊ. ಯು.ಎಸ್ ಶೆಣೈ ಇದ್ದರು.

 

Exit mobile version