Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ: ಶುಭದಾ ಶಾಲೆಗಳ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜನರು ಉದ್ಯೋಗ ನಿಮಿತ್ತ ಎಲ್ಲಿಗೇ ಹೋದರೂ ಹುಟ್ಟೂರನ್ನು ಮರೆಯಬಾರದು. ಅದರೊಂದಿಗೆ ಅಲ್ಲಿನ ಕೊರತೆಗಳನ್ನು ನೀಗಲು ಸಾಧ್ಯವಾದಷ್ಟು ನೆರವಾಗುವ ಮೂಲಕ ಅದರ ಋಣ ತೀರಿಸಬೇಕು ಎಂದು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು.

ಶುಕ್ರವಾರ ಆರಂಭವಾದ ಕಿರಿಮಂಜೇಶ್ವರ ಶುಭದಾ ಶಾಲೆಗಳ ವಾರ್ಷಿಕೋತ್ಸವ ಮತ್ತು ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸುವುದು ಸವಾಲಿನ ಕೆಲಸ. ಮುಂಬೈಯಲ್ಲಿ ಉದ್ಯಮಿಯಾಗಿರುವ ಎನ್. ಕೆ. ಬಿಲ್ಲವ-ಶುಭದಾ ಬಿಲ್ಲವ ದಂಪತಿ ಹುಟ್ಟೂರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ೨೫ ವರ್ಷಗಳ ಹಿಂದೆ ಸ್ಥಾಪಿಸಿದ ಶಾಲೆ ಈಗ ಸುಸಜ್ಜಿತವಾಗಿ ಬೆಳೆದು ಅವರ ಆಶಯವನ್ನು ಈಡೇರಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಪಠ್ಯ ಮತ್ತು ಸಹಪಠ್ಯ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿ’ ಎಂದು ಅವರು ಹಾರೈಸಿದರು.

ಶುಭದಾ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷೆ ಶುಭದಾ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ತಾವು ಶಾಲೆಯ ಆರಂಭದ ಹಂತದಲ್ಲಿ ಶಾಲೆಯೊಂದಿಗೆ ಹೊಂದಿದ್ದ ಸಂಬಂಧವನ್ನು ಸ್ಮರಿಸಿದರು. ಮಂಗಳೂರು ವಿಮಾನ ನಿಲ್ದಾಣದ ಪೊಲೀಸ್ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕುಂದರ್ ಮಕ್ಕಳು ಸೂಕ್ಷ್ಮ ಗ್ರಹಣ ಶಕ್ತಿ, ಅನುಕರಣಾ ಸ್ವಭಾವ ಹೊಂದಿರುವುದರಿಂದ ಪೋಷಕರು ಮತ್ತು ಶಿಕ್ಷಕರು ಅವರಿಗೆ ಉತ್ತಮ ಮಾದರಿಗಳಾಗಿರಬೇಕು ಎಂದರು. ಮುಂಬೈಯ ವಾಸ್ತು ಪರಿಣತ ಪಂಡಿತ ನವೀನಚಂದ್ರ ಸನಿಲ್, ಉದ್ಯಮಿ ಚಂದ್ರಶೇಖರ ಶೆಟ್ಟಿ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕನರಾಡಿ ವಾದಿರಾಜ ಭಟ್ ಶುಭ ಹಾರೈಸಿದರು. ಧ್ವಜಾರೋಹಣಗೈದ ಮುಂಬೈ ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಧರ್ಮೇಶ್ ಎಸ್ ಸಾಲಿಯನ್ ಎನ್. ಕೆ. ಬಿಲ್ಲವ ದಂಪತಿಯ ಶೈಕ್ಷಣಿಕ ಸೇವೆಯನ್ನು ಪ್ರಶಂಸಿಸಿದರು.

ಸಂಸ್ಥಾಪಕ ಡಾ. ಎನ್ ಕೆ ಬಿಲ್ಲವ, ಮುಖ್ಯೋಪಾಧ್ಯಾಯ ರವಿದಾಸ್ ಶೆಟ್ಟಿ, ನಿರ್ದೇಶಕ ಕೆ. ಪುಂಡಲೀಕ ನಾಯಕ್, ಸಂಚಾಲಕ ಶಂಕರ್ ಪೂಜಾರಿ, ಸಂಯೋಜಕಿ ಗೀತಾದೇವಿ ಅಡಿಗ, ಯು. ಎಚ್. ರಾಜಾರಾಮ್ ಭಟ್, ಟ್ರಸ್ಟಿಗಳಾದ ಮಂಜು ಪೂಜಾರಿ, ಎಚ್. ಬಿ. ತೇಜಪ್ಪ ಶೆಟ್ಟಿ ಸದಸ್ಯರಾದ ಶೇಖರ್ ಪೂಜಾರಿ, ರಾಜೀವ್ ಶೆಟ್ಟಿ, ಉದಯ ಪೂಜಾರಿ, ಸತೀಶ್ ಪೂಜಾರಿ, ಬಿ. ಎ. ಹಂಝಾ, ತೇಜ ಪೂಜಾರಿ, ವೈಶಾಖ್ ನಾಯರ್ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ಮೇಘನಾ ಜಿ ಸ್ವಾಗತಿಸಿ, ಸ್ವೀಕೃತಿ ವಂದಿಸಿದರು. ಪ್ರಣಮ್ಯಾ ನಿರೂಪಿಸಿದರು.

 

Exit mobile version