Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರ ಪತ್ತೆಗೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ: ಗೃಹ ಸಚಿವ ಎಂ.ಬಿ. ಪಾಟೀಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ, ಕೋಸ್ಟಲ್ ಗಾರ್ಡ್ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆ ಮಾಹಿತಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕಾರಿಗಳಿಂದ ಪಡೆದುಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವರು, ಕಾರ್ಯಾಚರಣೆಯ ಪ್ರತಿಯೊಂದು ಹಂತದ ಮಾಹಿತಿ ಪಡೆದರು. ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಮೀನುಗಾರಿಕಾ ಮುಖಂಡರ ಜತೆ ಕಾರ್ಯಾಚರಣೆಯ ವಿವರವನ್ನು ತಿಳಿಸಿದರು.

ಬೋಟ್ ನಾಪತ್ತೆಯಾದ ಬಳಿಕ ಡಿ.23ರಿಂದ ಪ್ರತಿದಿನ ಹೆಲಿಕಾಪ್ಟರ್ ಹಾಗೂ ಹಡಗುಗಳನ್ನು ಬಳಸಿಕೊಂಡು ಶೋಧ ನಡೆಸಲಾಗಿದೆ. ಕೋಸ್ಟಲ್ ಗಾರ್ಡ್ ಸಿಬ್ಬಂದಿ ತಂತ್ರಜ್ಞಾನದ ನೆರವಿನಿಂದ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೀನುಗಾರರ ಜೀವದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಶೋಧ ನಡೆಸುತ್ತಿದೆ ಎಂದರು.

ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರರು ಆತಂಕದಲ್ಲಿದ್ದು, ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಜತೆಗೆ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರದ ಜತೆಗೆ ಸಭೆ ನಡೆಸಿ ರಾಜ್ಯದ ಮೀನುಗಾರರಿಗೆ ರಕ್ಷಣೆ ನೀಡಲು ಮನವಿ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು ‘ಮಹಾರಾಷ್ಟ್ರ ಹಾಗೂ ಗೋವಾ ಗಡಿ ಪ್ರವೇಶಿಸುವ ಕರ್ನಾಟಕದ ಮೀನುಗಾರರಿಗೆ ತೊಂದರೆ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಈ ಸಂಬಂಧ ಎರಡೂ ಸರ್ಕಾರಗಳ ಜತೆಗೆ ಸಭೆ ನಡೆಸಿ ಗಡಿ ದಾಟುವ ರಾಜ್ಯದ ಮೀನುಗಾರರಿಗೆ ತೊಂದರೆ ನೀಡದಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಕಡಲ್ಗಳ್ಳರು ಅಥವಾ ಭಯೋತ್ಪಾದಕರು ಬೋಟ್ ಅಪಹರಿಸಿರುವ ಶಂಕೆ ಇದೆ. ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ ಎಂದರು.

ಮೀನುಗಾರ ಸಮಾಜದ ಮುಖಂಡ ಜಿ.ಶಂಕರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಗತ್ಯ ನೆರವು ಕೋರಬೇಕು. ರೈತರಿಗೆ ಸಮಸ್ಯೆಯಾದರೆ ತಕ್ಷಣ ಸ್ಪಂದಿಸುವ ರಾಜ್ಯ ಸರ್ಕಾರ, 7 ಮೀನುಗಾರರು ನಾಪತ್ತೆಯಾಗಿದ್ದರೂ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಗೃಹಸಚಿವರೊಂದಿಗೆ ಸಭೆ ನಡೆಸಿ, ಸಿಂಧುದುರ್ಗ ಭಾಗದ ರೌಡಿಗಳನ್ನು ವಶಕ್ಕೆ ಪಡೆದು ವಿಚಾರಿಸಿದರೆ ಸತ್ಯ ಬಹಿರಂಗವಾಗಬಹುದು ಎಂದು ಶಂಕರ್ ಸಲಹೆ ನೀಡಿದರು.

ಕರಾವಳಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಮೀನುಗಾರರು ಕಡಲಿಗೆ ಇಳಿಯಲು ಹೆದರುತ್ತಿದ್ದಾರೆ. ನಾಪತ್ತೆಯಾದ ಕುಟುಂಬಗಳಿಗೆ ಧೈರ್ಯ ತುಂಬುವವರು ಯಾರು ಎಂದು ಮೀನುಗಾರರ ಮುಖಂಡರಾದ ಸತೀಶ್ ಕುಂದರ್, ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ 10 ದಿನ ವಾಸ್ತವ್ಯ ಹೂಡಿದ್ದ ಮೀನುಗಾರಿಕಾ ಸಚಿವರು, ಬೋಟ್ ಕಣ್ಮರೆಯಾಗಿ 20 ದಿನಗಳು ಕಳೆದರೂ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ. ಮೀನುಗಾರರ ಕಷ್ಟು ವಿಚಾರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Exit mobile version