Kundapra.com ಕುಂದಾಪ್ರ ಡಾಟ್ ಕಾಂ

ಡಾ. ಮಧುಕರ ಶೆಟ್ಟಿ ಸಾವಿನ ನಿಗೂಡತೆ ಹಾಗೆಯೇ ಉಳಿದಿದೆ: ದಿನೇಶ್ ಅಮೀನ್‌ಮಟ್ಟು

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ನಿರಂತರ ಸಂಪರ್ಕ ಇಲ್ಲದೆ ಇದ್ದರೂ, ಕರ್ತವ್ಯ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಗುರುತಿಸಿಕೊಂಡಿದ್ದ ಡಾ.ಕೆ.ಮಧುಕರ ಶೆಟ್ಟಿ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದವರು. ಶಬ್ದಗಳಿಂದ ಅವರಿಗೆ ಶ್ರದ್ದಾಂಜಲಿ ಅರ್ಪಿಸಲು ಸಾಧ್ಯವಿಲ್ಲ. ದೇಶದ ಪೊಲೀಸ್‌ ವ್ಯವಸ್ಥೆಯ ಹೊಳೆಯುವ ನಕ್ಷತ್ರ ಅವರಾಗಿದ್ದರು ಎಂದು ರಾಜ್ಯದ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಅಜಯ್‌ಕುಮಾರ್‌ ಸಿಂಗ್‌ ಹೇಳಿದರು.

ಅಂಕದಕಟ್ಟೆಯ ಸಹನಾ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಡಾ.ಕೆ.ಮಧುಕರ ಶೆಟ್ಟಿ ಪ್ರಾರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರು ಆದರ್ಶವಾದಿಗಳ ಮಕ್ಕಳು ಯಾವತ್ತು ಅವರ ವಿರುದ್ದವಾಗಿರುತ್ತಾರೆ ಹಾಗೂ ಆದರ್ಶಗಳಿಗೆ ಮೊದಲ ಬಲಿಯಾಗುವುದು ಅವರ ಕುಟುಂಬ ಎನ್ನುವುದನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಆದರೆ ಇಲ್ಲಿ ಹಾಗಾಗಲಿಲ್ಲ. ತಂದೆಯ ವ್ಯಕ್ತಿತ್ವವನ್ನು ಮೀರಿದ ಕಡು ಆದರ್ಶವಾದಿ ಅವರಾಗಿದ್ದರು. ಗಾಂಧೀಜಿ, ಅಂಬೇಡ್ಕರ್‌, ಬುದ್ಧ ಮುಂತಾದ ಆದರ್ಶ ಪುರುಷರ ಆದರ್ಶಗಳು ನಮ್ಮ ಮನೆಯ ಮಕ್ಕಳಿಗೆ ಬೇಡ ಅದು ಪಕ್ಕದ ಮನೆಯ ಮಕ್ಕಳಿಗೆ ಇರಲಿ ಎನ್ನುವ ಕಾಲಘಟ್ಟದಲ್ಲಿ ತಂದೆ ವಡ್ಡರ್ಸೆಯವರ ಪ್ರೇರಿತ ವ್ಯಕ್ತಿತ್ವದಿಂದ ರೂಪಿತಗೊಂಡ ಸ್ವತಂತ್ರ ವ್ಯಕ್ತಿತ್ವ ಅವರದ್ದಾಗಿತ್ತು. ಯಶಸ್ಸಿಗಾಗಿ ಮೇಲಾಧಿಕಾರಿ ಓಲೈಕೆ ಹಾಗೂ ಕೆಳಗಿನವರ ಮೇಲೆ ದಬ್ಬಾಳಿಕೆ ಎನ್ನುವ ಸೂತ್ರದ ವಿರುದ್ಧವಾಗಿ ಬಾಳಿದವರು ಮಧುಕರ ಶೆಟ್ಟಿ. ಮೇಲಾಧಿಕಾರಿಗಳೊಂದಿಗೆ ಸಂಘರ್ಷ ಹಾಗೂ ಕೆಳಗಿನವರೊಂದಿಗೆ ಪ್ರೀತಿಯಿಂದ ಬದುಕಿದ್ದ ಅವರನ್ನು ಚಿಕ್ಕಮಗಳೂರಿನಿಂದ ವರ್ಗಾವಣೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವರೇ ಇಂದು ಅವರ ಗುಣಗಾನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ವಿಜ್ಞಾನ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದ್ದ ಡಾ.ಕೆ.ಮಧುಕರ ಶೆಟ್ಟಿಯವರ ಸಾವು ಒಂದಷ್ಟು ನಿಗೂಢತೆಯನ್ನ ಉಳಿಸಿದೆ. ಇಲ್ಲಿ ವಿವಾದ ಮಾಡುವ ಉದ್ದೇಶ ನನಗಿಲ್ಲ ಆದರೆ ಸಾವಿನ ನಿಜ ಕಾರಣ ತಿಳಿದುಕೊಳ್ಳಬೇಕು ಎನ್ನುವ ಕಾತರ ಎಲ್ಲರಿಗೂ ಇದೆ ಎಂದರು.

ಸಭೆಯಲ್ಲಿ ಮಾತನಾಡಿದ ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕ ಅರುಣ್‌ ಚಕ್ರವರ್ತಿ ಅವರು ನಾವು ಸುರಕ್ಷಿತ ತಾಣಗಳನ್ನು ಸೇರಿದಾಗ ಸಂಬಂಧಗಳ ಸ್ವರೂಪ ಬದಲಾಗುತ್ತದೆ. ಆದರೆ ಎಂದೂ ಬದಲಾಗವದ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಮಧು ಪ್ರಾರಂಭದಲ್ಲಿ ಗೆಳೆಯನಾಗಿ ನಂತರ ಗುರುವಾಗಿ ಬದಲಾಗಿದ್ದರು. ಪ್ರಚಾರತೆ ಬಯಸದ ಅವರಲ್ಲಿ ಹೊಸ ಹೊಸ ಯೋಜನೆಗಳಿದ್ದವು. ಸಾಮಾಜಿಕ ಚಿಂತನೆ ಹಾಗೂ ಮಾನವೀಯ ದೃಷ್ಟಿಕೋನಗಳಿದ್ದವು. ಎಂದು ಕಣ್ಣೀರು ಸುರಿಸಿದರು.

ಬೆಂಗಳೂರಿನ ಪೊಲೀಸ್‌ ಕಾನ್‌ಸ್ಟೇಬಲ್‌ ದಶರತ್‌, ದಯಾನಂದ, ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ವಿಅಜ್ಞಾನಿ ಮುತ್ತುರಾಮನ್‌, ಅನಿವಾಸಿ ಭಾರತೀಯ ಜಿಜಿಲ್‌ ರಾಮಕೃಷ್ಣ, ಬೆಂಗಳೂರಿನ ನ್ಯಾಶನಲ್‌ ಕಾಲೇಜಿನ ಉಪನ್ಯಾಸಕರುಗಳಾದ ಮೌಲೇಶ್‌, ಪ್ರಮೋದ್‌ ಮುತಾಲಿಕ್‌, ಸುಬ್ಬಾ ರಾವ್‌, ಹಿರಿಯ ಐಪಿಎಸ್‌ ಅಧಿಕಾರಿ ದೀಪಿಕಾ ಸೂರಿ, ಎಡಿಜಿಪಿ ರವೀಂದ್ರನಾಥ್‌, ಬೆಂಗಳೂರಿನ ಕಾಲೇಜು ಸಹಪಾಠಿ ತಾರಕೇಶ್ವರ, ದೆಹಲಿಯ ಕಾಲೇಜು ಸಹಪಾಠಿ ಐವನ್‌ ಲೋಬೋ, ಹೆಚ್ಚುವರಿ ಎಸ್‌.ಪಿ ನಂದಿನಿ ನುಡಿ ನಮನ ಅರ್ಪಿಸಿದರು.

ಸುವರ್ಣ ಮಧುಕರ ಶೆಟ್ಟಿ, ಪುತ್ರಿ ಸಮ್ಯ ಮಧುಕರ ಶೆಟ್ಟಿ, ಹಿರಿಯ ಸಹೋದರ ಮುರಳೀಧರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷಣ ನಿಂಬರ್ಗಿ, ಹೆಚ್ಚುವರಿ ಎಸ್‌.ಪಿ ಕುಮಾರಚಂದ್ರ ಇದ್ದರು.

ದಿನೇಶ್‌ ಅಮೀನ್‌ಮಟ್ಟು ಹಾಗೂ ರಾಮಕೃಷ್ಣ ಪ್ರಸಾದ್‌ ನಿರೂಪಿಸಿದರು, ಕಿರಿಯ ಸಹೋದರ ಸುಧಾಕರ ಶೆಟ್ಟಿ ವಂದಿಸಿದರು.

Exit mobile version