Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಹತ್ತು ಆರೋಪಿಗಳ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಕ್ರಮವಾಗಿ ಚಿರತೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಚರ್ಮ ಸಹಿತ ಹತ್ತು ಜನ ಆರೋಪಿಗಳು ಸಿಕ್ಕಿ ಬಿದ್ದ ಘಟನೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಾರದೊಳಗೆ ನಡೆದ ಮೂರನೇ ಪ್ರಕರಣ ಇದಾಗಿದೆ.

ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳನ್ನು ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನ ಹಿಂದೂರ್ ಈಸ್ಟ್ ನಿವಾಸಿ ಶಾಮ್ಯುಯೆಲ್ ಎಂಬಾತನ ಪುತ್ರ ಸೂರಜ್(೩೪), ಭಟ್ಕಳ ಸಾಗರ ರಸ್ತೆಯ ಕಡುವಿನಕಟ್ಟೆ ನಿವಾಸಿ ರಘು, ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಮಯ್ಯಾಡಿ ಶ್ರೀಧರ ಎಂಬಾತನ ಪುತ್ರ ನಾಗರಾಜ್, ಭಟ್ಕಳದ ಅಡವಳ್ಳಿ ನಿವಾಸಿ ವೆಂಕಟೇಶ್ ನಾಯಕ್ ಎಂಬಾತನ ಪುತ್ರ ನಾಗರಾಜ್, ಬೇಂಗ್ರೆ ಚಿಂಗಾರಮಕ್ಕಿ ನಿವಾಸಿ ದಿ. ರಾಮ ಎಂಬಾತನ ಪುತ್ರ ಪ್ರವೀಣ್ ರಾಮ್ ದೇವಾಡಿಗ, ವೆಂಕಟಪುರ ಗ್ರಾಮದ ರಂಗಿನಕಟ್ಟೆ ಗಣಪತಿ ಎಂಬಾಥನ ಪುತ್ರ ಮೋಹನ ಜಿ. ನಾಯ್ಕ(24), ಬೈಂದೂರು ತೆಗ್ಗರ್ಸೆ ಕಂಬಳಗದ್ದೆ ರಸ್ತೆ ನಿವಾಸಿ ದಿ. ತಮ್ಮಯ್ಯ ಪೂಜಾರಿ ಎಂಬಾತನ ಪುತ್ರ ಸಂಜೀವ ಪೂಜಾರಿ(35), ಬೈಂದೂರು ತೆಗ್ಗರ್ಸೆ ಕಂಠದಮನೆ ದಿ. ರಾಮಯ್ಯ ಶೆಟ್ಟಿ ಪುತ್ರ ವೀರೇಂದ್ರ ಶೆಟ್ಟಿ(35), ಹೊನ್ನಾವರ ಮಾಗೋಡು ಗ್ರಾಮದ ಪೌಲ್ ಎಂಬಾತನ ಪುತ್ರ ಜಾಸ್ವನ್(32) ಹಾಗೂ ಭಟ್ಕಳದ ಸೋನಾರ್‌ತೇರಿ ವೀಟಿ ರಸ್ತೆ ನಿವಾಸಿ ಸದಾನಂದ ರಾಯ್ಕರ್ ಪುತ್ರ ಸುಬ್ರಹ್ಮಣ್ಯ(34) ಎಂದು ಗುರುತಿಸಲಾಗಿದೆ.

ಆರೋಪಿಗಳು ಚರತೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಮಾತುಕತೆ ನಡೆಸಿದ ಸಿಐಡಿ ಅರಣ್ಯ ಘಟಕ ಬೆಂಗಳೂರು ಇದರ ಡಿವೈಎಸ್ಪಿ ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಎಚ್.ಕೆ. ರವಿಕುಮಾರ್ ಹಾಗೂ ಎಂ.ಎಸ್.ರಾಮಮೂರ್ತಿ, ಸಿಬ್ಬಂದಿಗಳಾದ ಬಿ.ಹೆಚ್.ಹೇಮಕುಮಾರ್ ಮತ್ತು ಬಿ.ವಿ.ಪರಮೇಶ್ ವ್ಯವಹಾರ ಕುದುರಿಸಿದ್ದು, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಹಣ ಕೊಡುವುದಾಗಿ ಬರಹೇಳಿದ್ದರು. ಆರೋಪಿಗಳು ಒಂದು ಹೋಂಡಾ ಮೇಜ್ ಹಾಗೂ ಮಾರುತಿ 800ರಲ್ಲಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಆಗಮಿಸಿದ್ದು, ಈ ಸಂದರ್ಭ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಅಧಿಕಾರಿಗಳಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ವಶಪಡಿಸಿಕೊಳ್ಳಲಾದ ಚಿರತೆಯ ಚರ್ಮ ಸುಮಾರು ನಾಲ್ಕು ವರ್ಷ ಪ್ರಾಯದ ಚಿರತೆಯದ್ದು ಎಂದು ಅಂದಾಜಿಸಲಾಗಿದೆ. ಕುಂದಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಆರೋಪಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಕಳೆದ ಒಂದು ವಾರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆಯ ಪ್ರವಾಸ ನಡೆಸಿದ್ದ ಸಿಐಡಿ ಅಧಿಕಾರಿಗಳು ಮೂರು ಪ್ರಕರಣ ದಾಖಲಿಸಿದ್ದು, ಅರಣ್ಯ ಇಲಾಖೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.

 

Exit mobile version