Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ರಾಜ್ಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್-2019 ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಾಲಾ ಕಾಲೇಜುಗಳಲ್ಲಿ ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಬೆಳೆಸಬೇಕು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಪಡುವರಿ ಗ್ರಾಮದ ಸೋಮೇಶ್ವರ ಕಡಲ ತೀರದಲ್ಲಿ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಬೆಸುಗೆ ಫೌಂಡೇಶನ್ ಬಂದೂರು, ಗ್ರಾಪಂ ಪಡುವರಿ, ಜಿಲ್ಲಾಡಳಿತ ಉಡುಪಿ ಮತ್ತು ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುವ ೬ನೇ ಕರ್ನಾಟಕ ರಾಜ್ಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್-೨೦೧೯ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಹಕರಿಯಾಗಬಲ್ಲದು. ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜಿಪಂ ಸದಸ್ಯ ಸುರೇಶ ಬಟವಾಡಿ, ತಾಪಂ ಸದಸ್ಯರಾದ ಗಿರೀಜಾ ಖಾರ್ವಿ, ಪುಷ್ಪರಾಜ್ ಶೆಟ್ಟಿ, ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ನಿವೃತ್ತ ಐಎಫ್‌ಎಸ್‌ಬಿ. ಜಗನ್ನಾಥ ಶೆಟ್ಟಿ, ಬೆಂಗಳೂರು ಕೋಚ್ ಬಿ. ಸಿ ರವೀಂದ್ರ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಮುನಿರಾಜ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ಎನ್. ದೀಪಕ್ ಕುಮಾರ ಶೆಟ್ಟಿ, ಜಿಲ್ಲಾ, ರಾಜ್ಯ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳು, ವಿವಿಧ ತಂಡಗಳ ಪ್ರಾಯೋಜಕರು ಉಪಸ್ಥಿತರಿದ್ದರು.

ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಜಯಾನಂದ ಹೋಬಳಿದಾರ್ ಸ್ವಾಗತಿಸಿ, ಬೆಸುಗೆ ಫೌಂಡೇಶನ್ ಅಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ ಪ್ರಾಸ್ತಾವಿಸಿದರು. ಗಣಪತಿ ಹೋಬಳಿದಾರ್ ಮತ್ತು ರಾಘವೇಂದ್ರ ದಡ್ಡು ನಿರೂಪಿಸಿದರು. ಸತ್ಯನಾರಾಯಣ ಬಾಡ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ೨೩ ಬಾಲಕರ ಹಾಗೂ ೧೬ ಬಾಲಕಿಯರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

 

Exit mobile version