ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೀಳಿದ್ದವನಿಗೆ ಗೋಳಿಲ್ಲ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಲು ಪೋಷಕರು ಅವಕಾಶ ಮಾಡಿಕೊಡಬೇಕು. ಗೀಳು ಎಲ್ಲರನ್ನು ಸೆಳೆಯೊಲ್ಲ. ಅದರೆಡೆಗೆ ಸಾಗಿದವರು ಮುಂದೊಂದು ದಿನ ದೊಡ್ಡ ವ್ಯಕ್ತಿಗಳೇ ಆಗುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಮಗುವಿಗೆ ಕಲೆಯ ಗೀಳನ್ನು ಅಂಟಿಸುವ ಪ್ರಯತ್ನ ಮಾಡುತ್ತಿರುವ ಸುರಭಿಯಂತಹ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪ್ರಸಿದ್ಧ ರಂಗನಟ ಹಾಗೂ ಚಲನಚಿತ್ರ ನಟ ರಮೇಶ್ ಭಟ್ ಹೇಳಿದರು.
ಅವರು ಗುರುವಾರ ಬೈಂದೂರು ಶಾರದಾ ವೇದಿಕೆಯಲ್ಲಿ 19ನೇ ವರ್ಷದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ ’ಸುರಭಿ ಜೈಸಿರಿ’ ಕಾರ್ಯಕ್ರಮದಲ್ಲಿ ’ಬಿಂದುಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನ್ಮ ಕೊಟ್ಟ ಭೂಮಿ, ಹೆತ್ತ ತಾಯಿ ಎರಡೂ ಅಮೂಲ್ಯ ರತ್ನಗಳು. ಆದರೆ ನನ್ನ ಪಾಲಿಗೆ ಈಗ ಮತ್ತೊಂದು ರತ್ನ ಒದಗಿ ಬಂದಿದೆ, ಅದು ಬಿಂದುಶ್ರೀ ಪ್ರಶಸ್ತಿ. ತಾನು ಸಿನೆಮಾ ರಂಗಕ್ಕೆ ಬಂದು ನಲವತ್ತೈದು ವರ್ಷ ಕಳೆದಿದ್ದೇನೆ. ಹತ್ತಾರು ನಿರ್ದೇಶಕರು, ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೆಲ್ಲದರ ದೆಸೆಯಿಂದ ನಾಡಿನಾದ್ಯಂತ ಎಷ್ಟೋ ಶಾಲು, ಹಾರಗಳು ಸಿಕ್ಕಿವೆ. ಆದರೆ ನನ್ನ ಹುಟ್ಟೂರಿನ ಈ ಪ್ರಶಸ್ತಿ ಜೀವಮಾನದ ಶ್ರೇಷ್ಠ ಪುರಸ್ಕಾರ ಎಂದು ಭಾವಿಸುತ್ತೇನೆ. ಬದುಕಿನ ಕೊನೆಯ ತನಕವೂ ನಟಿಸುತ್ತಲೇ ಇರಬೇಕು. ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುದೇ ನನ್ನ ಆಸೆ ಎಂದು ಭಾವುಕರಾಗಿ ನುಡಿದರು.
ಬೈಂದೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವಸಂತ ಹೆಗ್ಡೆ ಮುಂದಿನ ವರ್ಷದ ಯೋಜನೆಗಳ ಪತ್ರವನ್ನು ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಮ್ಮೂರಿನ ನೂರಾರು ಸಾಧಕರಿದ್ದು, ಅವರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕೆಲಸ. ಕಲೆಯನ್ನು ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸಿ ಕೃತಜ್ಞತೆ ಸಲ್ಲಿಸುವ ಪರಿಪಾಠ ವಿದ್ಯಾರ್ಥಿಗಳಿಗೆ ನಿಜಕ್ಕೂ ಶ್ರೇಯಸ್ಸನ್ನು ತಂದುಕೊಡುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಬೈಂದೂರು ಉದ್ಯಮಿ ಪ್ರಕಾಶ್ ಭಟ್, ಬೈಂದೂರು ಜೆಸಿಐ ಅಧ್ಯಕ್ಷ ಮಣಿಕಂಠ ಅತಿಥಿಗಳಾಗಿದ್ದರು. ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ, ನಿರ್ದೇಶಕ ಗಣಪತಿ ಹೋಬಳಿದಾರ್, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಕಬ್ಸೆ ಉಪಸ್ಥಿತರಿದ್ದರು.
ಈ ಸಂದರ್ಭ ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಹಾಗೂ ಚಂಡೆ ಗುರು ರಾಜರಾಮ್ ರಾವ್ ಕುಂದಾಪುರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲಾಯಿತು.
ಬಿಂದುಶ್ರೀ ಪ್ರಶಸ್ತಿ ಆಯ್ಕೆ ಸಮಿತಿಯ ಜನಾರ್ದನ ಎಸ್. ಮರವಂತೆ ಅಭಿನಂದನಾ ಭಾಷಣ ಮಾಡಿದರು. ಸುರಭಿ ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸುರಭಿ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ಕಾಲ್ತೋಡು ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ ಧನ್ಯವಾದಗೈದರು. ಉಪಾಧ್ಯಕ್ಷ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಸಹಕರಿಸಿದರು.
Also Read:
► ಸಂಗೀತ ಕಲಾವಿದೆ ಗೌರಿ ತಗ್ಗರ್ಸೆಗೆ ಸನ್ಮಾನ – https://kundapraa.com/?p=30917
► ಸಮಾಜದ ಸ್ವಸ್ಥ್ಯಕ್ಕೆ ಕಲೆಯ ಆಸ್ವಾದನೆ ಆಗತ್ಯ: ಎಸ್. ಪ್ರಕಾಶ್ಚಂದ್ರ ಶೆಟ್ಟಿ – https://kundapraa.com/?p=30911
► ಪ್ರಸಿದ್ಧ ನಟ ರಮೇಶ್ ಭಟ್‌ಗೆ ಬಿಂದಶ್ರೀ ಪ್ರಶಸ್ತಿ – https://kundapraa.com/?p=30908
► ಸುರಭಿ ಜೈಸಿರಿ ಆಮಂತ್ರಣ ಪತ್ರಿಕೆ ಬಿಡುಗಡೆ – https://kundapraa.com/?p=30847
► ಜ.23ರಿಂದ ಸುರಭಿ ಜೈಸಿರಿ – ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ – https://kundapraa.com/?p=30841