ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಂತ್ರ, ಸ್ತೋತ್ರ ಪಠಣಕ್ಕೆ ದೇವರನ್ನು ಒಲಿಸಿಕೊಳ್ಳುವ ಶಕ್ತಿ ಇರುವುದರ ಜತೆಗೆ ಅವುಗಳಿಂದ ಹೊಮ್ಮುವ ಶಕ್ತಿಯುತವಾದ ತರಂಗಗಳಿಗೆ ಪ್ರಕೃತಿ ವಿಕೋಪಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಇದೆ. ಸನಾತನವಾದ ಮಂತ್ರಗಳು ಸಂಖ್ಯಾ ಶಾಸ್ತ್ರವನ್ನು ಅವಲಂಬಿಸಿವೆ. ಹಾಗಾಗಿ ಅವು ನಿರ್ದಿಷ್ಟ ಸಖ್ಯಾಗುಣಕಗಳಲ್ಲಿ ರಚನೆಯಾಗಿವೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಪಡುವರಿಯ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಭಜನಾ ಮಂಡಳಿ, ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಆಂದೋಲನ ಇವರ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಮುದ್ರದ ಅಧಿದೇವತೆ ನಾರಾಯಣ. ನಾರ ಎಂದರೆ ನೀರು, ಅಯನ ಎಂದರೆ ಚಲನೆ. ನೀರಿನ ಚಲನೆ ಇತಿಮಿತಿಯಲ್ಲಿದ್ದರೆ ಜಗತ್ತಿಗೆ ಕ್ಷೇಮ. ಅದನ್ನು ನಿಯಂತ್ರಿಸುವವನು ಶ್ರೀಮನ್ನಾರಾಯಣ. ಅವನಿಗೆ ಪ್ರಕೃತಿ ನಿಯಮವನ್ನು ಮೀರಿ ಅದನ್ನು ನಿಯಂತ್ರಿಸುವ ಶಕ್ತಿ ಇದೆ. ವಿಷ್ಣು ಆರಾಧನೆಯಿಂದ ಪ್ರಾಕೃತಿಕ ಸಮತೋಲನ, ಗ್ರಾಮದಲ್ಲಿ ಶಾಂತಿ, ಕುಟುಂಬ ರಕ್ಷಣೆ ಹಾಗೂ ಮಾತೃಭೂಮಿ ಉನ್ನತಿಗಾಗಿ ಪ್ರಾರ್ಥಿಸಿ ದೇವರನ್ನು ಒಲಿಸಿಕೊಳ್ಳಬಹುದು ಎಂದರು.
ಪಶ್ಚಿಮ ಕರಾವಳಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಆಂದೋಲನ ನಿರ್ದೇಶಕ ಡಾ. ಎಸ್. ಎನ್. ಪಡಿಯಾರ್, ನಿರ್ವಹಣಾ ಸಮಿತಿ ಅಧ್ಯಕ್ಷ ಸುಬ್ರಾಯ ಶೇರುಗಾರ್ ಸೋಡಿತಾರು, ಶ್ರೀರಾಮ ಭಜನಾ ಮಂಡಳಿ ಅಗಯಕ್ಷ ನಾಗಪ್ಪ ಎಸ್., ಶ್ರೀ ಸೋಮೇಶ್ವರ ದೇವಳದ ಧರ್ಮದರ್ಶಿ ಚನ್ನಕೇಶವ ಉಪಾಧ್ಯಾಯ, ಅರುಣಾ ಪಡಿಯಾರ್ ಕುಂದಾಪುರ, ಸಂತೋಷ್ ಕೋಣಿ, ರಶ್ಮೀರಾಜ್ ಇದ್ದರು. ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಪ್ರಾಸ್ತಾವಿಸಿದರು. ಜಿ. ಗೋಪಾಲ್ ಮಾಸ್ಟರ್ ಸ್ವಾಗತಿಸಿ, ಮಾತೃಮಂಡಳಿ ಅಧ್ಯಕ್ಷೆ ಸುಂದರಿ ವಂದಿಸಿದರು. ವಿ. ಎಚ್. ನಾಯಕ್ ನಿರೂಪಿಸಿದರು.
ಮಂತ್ರ, ಸ್ತೋತ್ರ ಪಠಣಕ್ಕೆ ಶರೀರದ ಷಟ್‌ಚಕ್ರಗಳನ್ನು ಪ್ರಭಾವಿಸುವ ಶಕ್ತಿ ಇದೆ. ಇದು ಖುಷಿ ಪರಂಪರೆ ಶಿಕ್ಷಣವಾಗಿದ್ದು, ಪ್ರತಿಫಲನಾ ಶಕ್ತಿಯ ಮೂಲಕ ಜೀವನೋಲ್ಲಾಸ ನೀಡುತ್ತವೆ. ವಿಷ್ಣು ಸಹಸ್ರನಾಮವು ಯುಧಿಷ್ಠಿರನಿಗೆ ಭೀಷ್ಮಾಚಾರ್ಯರಿಂದ ಪ್ರಣೀತವಾದುದು. ಇದರ ಪಠಣದಿಂದ ಬೌತಿಕ, ಲೌಕಿಕ ಪ್ರಯೋಜನವಿದೆ. ಅದನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪಠಿಸುವುದರಿಂದ ಸಾಮಾನ್ಯರೂ ಶ್ರೇಷ್ಠರಾಗಲು ಸಾಧ್ಯ – ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹಂಗಾರಕಟ್ಟೆ ಬಾಳಕುದ್ರು ಶ್ರೀಮಠ