Kundapra.com ಕುಂದಾಪ್ರ ಡಾಟ್ ಕಾಂ

ಗೀತಾನಂದ ಫೌಂಡೇಶನ್‌: ನೋಟ್ಸ್‌ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

ಕೋಟ: ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್‌ ವತಿಯಿಂದ ಸುಮಾರು 1,000 ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್‌ ಪುಸ್ತಕ ವಿತರಣೆ, 250 ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 2014-15ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಪ್ರತಿಭಾ ಪುರಸ್ಕಾರ ಹಾಗೂ ಪಸ್ತಕ ವಿತರಣೆ ಕಾರ್ಯಕ್ರಮ ಜೂ. 3ರಂದು ಪಡುಕರೆ ಗೀತಾನಂದ ಬಯಲು ರಂಗ ಮಂಟಪದಲ್ಲಿ ಜರಗಿತು.

ಡಾ| ಜಿ. ಶಂಕರ್‌ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಕಾರ್ಯಕ್ರಮ ಉದ್ಘಾಟಿಸಿ, ಶೈಕ್ಷಣಿಕ ಕಾರ್ಯಕ್ರಮಕ್ಕೆ ನೆರವು ನೀಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಪುಣ್ಯ ಲಭಿಸುತ್ತದೆ. ಊರಿನ ಶಿಕ್ಷಣ ಸಂಸ್ಥೆ ಉಳಿವಿಗೆ ಗ್ರಾಮಸ್ಥರ ಹೋರಾಟ ಅಗತ್ಯ. ಪಡುಕರೆಯಲ್ಲಿ ಒಂದೇ ಸೂರಿನಡಿ ಅಂಗನವಾಡಿಯಿಂದ ಪದವಿ ಶಿಕ್ಷಣದವರೆಗೆ ಶಿಕ್ಷಣ ಪಡೆಯಲು ಪ. ಪೂ. ಕಾಲೇಜು ಅಗತ್ಯವಿದೆ. ಈ ನಿಟ್ಟಿನಲ್ಲಿ ಅನೇಕ ವರ್ಷದಿಂದ ಹೋರಾಟ ನಡೆಸುತ್ತಿದ್ದು, ಸರಕಾರ ನಮ್ಮ ಕೋರಿಕೆಗೆ ಪುರಸ್ಕಾರ ನೀಡಿಲ್ಲ. ಮುಂದೆ ಈ ನಿಟ್ಟಿನಲ್ಲಿ ಸರ್ಮಪಕ ಹೋರಾಟ ನಡೆಸುವುದಾಗಿ ತಿಳಿಸಿದರು.

ಗೀತಾನಂದ ಟ್ರಸ್ಟ್‌ ಪ್ರವರ್ತಕ ಆನಂದ್‌ ಸಿ. ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಕೆ.ಸಿ. ಕುಂದರ್‌ ಅವರ ದೂರದೃಷ್ಟಿ ಹಾಗೂ ಡಾ| ಜಿ. ಶಂಕರ್‌ ಮೊದಲಾದ ದಾನಿಗಳ ನೆರವಿನಿಂದ ಪಡುಕರೆಯಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ನಮ್ಮ ಗೀತಾನಂದ ಟ್ರಸ್ಟ್‌ ವತಿಯಿಂದ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಿಗೆ 2014-15ನೇ ಸಾಲಿನಲ್ಲಿ 35 ಲಕ್ಷ ರೂ. ಕೊಡುಗೆ ನೀಡಲಾಗಿದೆ ಎಂದರು.

ಈ ಸಂದರ್ಭ ಉಚಿತ ನೋಟ್ಸ್‌ ಪುಸ್ತಕ ವಿತರಣೆ, ಪ್ರೋತ್ಸಾಹ ಧನ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ನಿವೃತ್ತ ಶಿಕ್ಷಕ ವಿಷ್ಣುಮೂರ್ತಿ ಭಟ್‌ ಮತ್ತು ಭವಾನಿ ರೈ ಅವರಿಗೆ ಸಾರ್ವಜನಿಕ ಸಮ್ಮಾನ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡುಕರೆ ಪ್ರೌಢಶಾಲೆ ಶೇಕಡ ನೂರು ಫಲಿತಾಂಶ ಪಡೆಯಲು ನೆರವಾದ ಶಿಕ್ಷಕರು, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹೇಮಂತ್‌ ಹಾಗೂ ರೇಷ್ಮಾ ಅವರನ್ನು ಸಮ್ಮಾನಿಸಲಾಯಿತು.

ಗೀತಾನಂದ ಟ್ರಸ್ಟ್‌ನ ಮುಖ್ಯಸ್ಥೆ ಗೀತಾ ಆನಂದ್‌ ಸಿ. ಕುಂದರ್‌, ದಿವ್ಯಾ ಪ್ರಶಾಂತ ಕುಂದರ್‌, ಮಣೂರು ಸ. ಸಂಯುಕ್ತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ| ಪ್ರಕಾಶ್‌ ತೋಳಾರ್‌, ಪ್ರಾಂಶುಪಾಲ ರಾಜೇಂದ್ರ ಎಸ್‌. ನಾಯಕ್‌, ಮೊಗವೀರ ಯುವ ಸಂಘಟನೆ ಜಿಲ್ಲಾ ಅಧ್ಯಕ್ಷ ಸದಾನಂದ ಬಳ್ಕೂರು, ಮುಖ್ಯ ಶಿಕ್ಷಕ ಪ್ರಕಾಶ್‌ ಹೆಬ್ಟಾರ್‌, ಸಾವಿತ್ರಮ್ಮ ಎಲ್‌, ಜ್ಯೋತಿ, ರಾಮಚಂದ್ರ ಐತಾಳ, ಜಾನಕಿ, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಮೊಗವೀರ ಮಹಿಳಾ ಸಂಘಟನೆ ಅಧ್ಯಕ್ಷೆ ಸುಜಾತಾ ಗೋಪಾಲ, ವಾಹಿನೀ ಯುವಕ ಮಂಡಲದ ಅಧ್ಯಕ್ಷ ರಮೇಶ ಎಚ್‌. ಕುಂದರ್‌ ಮೊದಲಾದವರು ಉಪಸ್ಥಿತರಿದ್ದರು.

ಕೋಟ ಮೊಗವೀರ ಯುವ ಸಂಘಟನೆ ಹಾಗೂ ಮಹಿಳಾ ಸಂಘಟನೆ ಕಾರ್ಯಕ್ರಮಕ್ಕೆ ಸಹಕಾರ ನೀಡಿತು. ಕೋಟ ಮೊಗವೀರ ಯುವ ಸಂಘಟನೆ ಅಧ್ಯಕ್ಷ ¬ಸುರೇಶ ಕೆ. ಸ್ವಾಗತಿಸಿ, ಮಮತಾ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.

ಮಣೂರು ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಸ. ಹಿ. ಪ್ರಾಥಮಿಕ ಶಾಲೆ ಕೋಟತಟ್ಟು, ಸ.ಹಿ. ಪ್ರಾಥಮಿಕ ಶಾಲೆ ಚಿತ್ರಪಾಡಿ, ಮಣೂರು ಶ್ರೀರಾಮಪ್ರಸಾದ ಅನುದಾನಿತ ಹಿ.ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಸೌಲಭ್ಯ ಪಡೆದುಕೊಂಡರು.

Exit mobile version