Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಾನೂನು ಮೀರಿ ತೆರಿಗೆ ವಿಧಿಸಲಾಗುತ್ತಿದೆ: ಎಸ್. ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶದಲ್ಲಿಯೇ ಮೊದಲ ಭಾರಿಗೆ ತೆರಿಗೆ ಇಲಾಖೆ ಮಂಗಳೂರು ವಿಭಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಬ್ಯಾಂಕಿಂಗ್ ವ್ಯವಹಾರ ಹಾಗೂ ಲಾಭದ ಮೇಲೆ ತೆರಿಗೆ ವಿಧಿಸಿರುವ ಕ್ರಮ ಕಾನೂನಿಗೂ ವಿರುದ್ಧವಾಗಿದ್ದು, ಕೃಷಿಕರ ನೆರವಿಗಾಗಿರುವ ಸಂಸ್ಥೆಗಳ ಮೇಲಿನ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಹಾರದ ಬಗೆಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ, ಅವರು ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಶನಿವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾಭವನದಲ್ಲಿ ಜರುಗಿದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

2006ರ ಹಣಕಾಸು ಕಾಯಿದೆ 80ಪಿ ತಿದ್ದುಪಡಿಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳು ತಮ್ಮ ಸದಸ್ಯರೊಂದಿಗೆ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವುದು, ಸಾಲ ಸೌಲಭ್ಯವನ್ನು ನೀಡುವುದು ಅಥವಾ ವ್ಯವಹಾರದಿಂದ ಲಾಭ ಮಾಡಿದರೆ ತೆರಿಗೆ ವಿಧಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ಕೃಷಿ ಪತ್ತಿನ ಸಂಘಗಳಿಗೆ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.

ಸಭೆಯಲ್ಲಿ ತೆರಿಗೆ ಸಲಹೆಗಾರ ಅಶೋಕ್ ಶೆಟ್ಟಿ, ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಓಗಳು ಭಾಗವಹಿಸಿದ್ದರು.

Exit mobile version