Kundapra.com ಕುಂದಾಪ್ರ ಡಾಟ್ ಕಾಂ

ಬಾವಿಯಿಂದ ಮೇಲೆ ಬರಲಾಗದವರನ್ನು ರಕ್ಷಿಸಿದ ಗ್ರಾ. ಪಂ. ಅಧ್ಯಕ್ಷ

ಕುಂದಾಪುರ: ಕೆಸರು, ಹೂಳು ತೆಗೆಯಲೆಂದು ಬಾವಿಗೆ ಇಳಿದು ಮೇಲೆ ಬರಲಾಗದೇ ಒದ್ದಾಡುತ್ತಿದ್ದ ಎಪ್ಪತ್ತರ ವಯಸ್ಸಿನ ಹಿರಿಯ ವ್ಯಕ್ತಿಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷರೇ ಸ್ವತಃ ಬಾವಿಗಿಳಿದು ಸುರಕ್ಷಿತವಾಗಿ ಮೇಲೆತ್ತಿದ ಘಟನೆ ನಾಡಾ ಗ್ರಾಮದ ರಾಮನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಮನಗರ ನಿವಾಸಿ ನಿವೃತ್ತ ಮಿಲಿಟರಿ ಅಧಿಕಾರಿ ಜೂ. 1ರಂದು ಬೆಳಗ್ಗೆ ತನ್ನ ತೋಟದ ಬಾವಿಯ ಕೆಸರು ಹೂಳು ತೆಗೆಯಲೆಂದು ಒಬ್ಬಂಟಿಯಾಗಿ ಬಾವಿಗಿಳಿದಿದ್ದರು. 40 ಅಡಿಗಳಷ್ಟು ಆಳವಿದ್ದ ಬಾವಿಯಿಂದ ಬುಟ್ಟಿಯ ಮೂಲಕ ಮೇಲೆತ್ತಿದ ಹೂಳನ್ನು ವಿಲೇವಾರಿ ಮಾಡಲು ನೆರೆಯವರಾದ ಬಚ್ಚಿ ಮತ್ತು ಮಂಜುನಾಥ ಪೂಜಾರಿ ಅವರು ಬಾವಿಕಟ್ಟೆಯಲ್ಲಿ ನಿಂತಿದ್ದರು. ಕೆಲಸ ಮುಗಿಸಿ ಬಾವಿಯಿಂದ ಮೇಲೆ ಬರಲು ಯತ್ನಿಸಿದ ಅವರು ಸರಾಗವಾಗಿ ಮೇಲೆ ಬರಲಾಗದೆ ಎಡವಿ ಎರಡು ಬಾರಿ ಬಾವಿಗೆ ಬಿದ್ದು, ಭಯ-ಆತಂಕದಿಂದ ಕೂಗಿಕೊಂಡರು.

ಅವರು ಅಪಾಯದಲ್ಲಿರುವುದನ್ನು ಗಮನಿಸಿದ ಮಂಜುನಾಥ ಪೂಜಾರಿ ಸಹಾಯಕ್ಕಾಗಿ ಬೇರೆಯವರನ್ನು ಕೂಗಿ ಕರೆದರು. ಓಡಿಬಂದು ಪರಿಸ್ಥಿತಿಯನ್ನು ಅರಿತ ಸ್ಥಳೀಯ ಯುವಕರಾದ ದಯಾನಂದ ಮತ್ತು ಸತ್ಯನಾರಾಯಣ ಅವರು ತತ್‌ಕ್ಷಣ ನಾಡಾ ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕಾಗಮಿಸಿದ ಗ್ರಾಮ ಪಂಚಾಯತ್‌ ಅಧ್ಯಕ್ಷರು ಪಂಚಾಯತ್‌ನಿಂದ ಹಗ್ಗ ಮತ್ತು ಉದ್ದವಾದ ಏಣಿಯನ್ನು ತರಿಸಿದರು. ಸಾಕಷ್ಟು ಉದ್ದನೆಯ ಹಗ್ಗವನ್ನು ಮಿಲಿಟರಿ ಅಧಿಕಾರಿಗೆ ಎಟುಕುವಂತೆ ಬಾವಿಗೆ ಇಳಿಬಿಟ್ಟು ನಂತರ ತಮ್ಮ ಸೊಂಟಕ್ಕೆ ಇನ್ನೊಂದು ಹಗ್ಗವನ್ನು ಕಟ್ಟಿಕೊಂಡು ತಾವೂ ಬಾವಿಯ ಮಧ್ಯಭಾಗದ ತನಕ ಇಳಿದ ಅಧ್ಯಕ್ಷರು ಅಲ್ಲಿಂದ ಉದ್ದವಾದ ಏಣಿಯೊಂದನ್ನು ಕೆಳಗೆ ಇಳಿಸಿ ಜಾಗರೂಕತೆಯಿಂದ ಮೇಲೆ ಬರುವಂತೆ ಮಿಲಿಟರಿ ಅಧಿಕಾರಿಗೆ ತಿಳಿಸಿದರು.

ಏಣಿ ಮತ್ತು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲೆ ಬಂದ ಮಿಲಿಟರಿ ಮ್ಯಾನ್‌ ಬದುಕಿದೆಯಾ ಬಡಜೀವವೇ ಎನ್ನುತ್ತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಾಡಾ ಸುತ್ತಮುತ್ತ ಯಾವುದೇ ಆಕಸ್ಮಿಕ ಘಟನೆಗಳು ನಡೆದರೂ ಸ್ವಯಂಸೇವಕರಾಗಿ ಸಹಕರಿಸುವ ಸಾಮಾಜಿಕ ಮನೋಭಾವದ ಯುವಕರಾದ ಕೆ. ಗೋಪಾಲಕೃಷ್ಣ, ಬಾಬು ದೇವಾಡಿಗ, ಶಿವಾನಂದ ಭಂಡಾರಿ, ರಾಜು ಪೂಜಾರಿ, ರಾಮಚಂದ್ರ, ಅರುಣ ಕಾಂಚನ್‌ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದು, ಕಾರ್ಯಾಚರಣೆಗೆ ಸಹಕರಿಸಿದರು.

Exit mobile version