Kundapra.com ಕುಂದಾಪ್ರ ಡಾಟ್ ಕಾಂ

ಮನುಷ್ಯನಲ್ಲಿ ಉತ್ತಮ ಗುಣವಿದ್ದರೆ ಕಲಿತ ವಿದ್ಯೆಗೂ ಬೆಲೆ ಬರುತ್ತದೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಹಿಳೆಯರಿಗೆ ಅವಕಾಶ ದೊರೆತರೆ, ಎಲ್ಲರಿಂದ ಉತ್ತಮ ಸಹಕಾರ ದೊರೆತರೆ ಕೈಹಿಡಿದ ಕಾರ್ಯ ಯಶಸ್ವಿಯಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು. ಉತ್ತಮ ಗುಣಗಳನ್ನು ಬೆಳೆಸಬೇಕು. ಸಂಜೆ ಮನೆ ಮನೆಗಳಲ್ಲಿ ಭಜನೆ, ಪ್ರಾರ್ಥನೆ ನಡೆದರೆ ಯುವಪೀಳಿಗೆಯಲ್ಲಿ ಧಾರ್ಮಿಕ ಚಿಂತನೆ ಬೆಳೆಯುತ್ತದೆ. ಮನುಷ್ಯನಲ್ಲಿ ಉತ್ತಮ ಗುಣವಿದ್ದರೆ ಆದ ಕಲಿತ ವಿದ್ಯೆಗೆ ಬೆಲೆ ಬರುತ್ತದೆ. ಸ್ವಸಹಾಯ ಸಂಘದ ಸದಸ್ಯರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ತಮ್ಮ ಜೀವನದ ಯಶಸ್ಸಿಗಾಗಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗಂಗೊಳ್ಳಿ ಶ್ರೀ ಪಂಜುರ್ಲಿ ದೈವಸ್ಥಾನದ ಮೊಕ್ತೇಸರ ಜಿ.ಪುರುಷೋತ್ತಮ ಆರ್ಕಾಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗಂಗೊಳ್ಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತ್ರಾಸಿ ವಲಯ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಭಾನುವಾರ ಜರಗಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಕಾರ್ಯದರ್ಶಿ ಶಿವಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಎಸ್. ಪೂಜಾರಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ತ್ರಾಸಿ ವಲಯ ಜನಜಾಗೃತಿ ವೇದಿಕೆ ಸದಸ್ಯ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಗಂಗೊಳ್ಳಿ ಕೊಂಕಣಿ ಖಾರ್ವಿ ಸಮಾಜ ಅಧ್ಯಕ್ಷ ದಿವಾಕರ ಖಾರ್ವಿ, ಗಂಗೊಳ್ಳಿ ಎ, ಗಂಗೊಳ್ಳಿ ಬಿ, ಗಂಗೊಳ್ಳಿ ಬಂದರು ಹಾಗೂ ಎಂ.ಜಿ. ಬಂದರು ಒಕ್ಕೂಟದ ನೂತನ ಹಾಗೂ ನಿರ್ಗಮಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ವೆಂಕಟೇಶ ನಾಯ್ಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರಾಧಾ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ರತ್ನಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಸ್ವಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಕೃಷ್ಣ ಪೂಜಾರಿ ವಂದಿಸಿದರು.

Exit mobile version