ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ವರ್ಷದೊಳಗೆ ಕ್ಷೇತ್ರ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಕಾರ್ಯಗಳಿಗಾಗಿ ನಾನಾ ಇಲಾಖೆಯಿಂದ ಸುಮಾರು ೧೪೭ ಕೋಟಿ ರೂ. ಅನುದಾನ ಮಂಜೂರಾತಿ ದೊರೆತಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨ ಸಾವಿರ ಹೆಕ್ಟೇರ್ ಭೂಪ್ರದೇಶದಕ್ಕೆ ನೀರುಣಿಸುವ ಬಹುಬೇಡಿಕೆಯ ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆಗೆ ಪ್ರಥಮ ಹಂತದಲ್ಲಿ ೫೦ ಕೋಟಿ ರೂ. ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ, ಲೋಕೊಪಯೋಗಿ ಇಲಾಖೆಯಿಂದ ಹೆಮ್ಮಾಡಿ-ನೆಂಪು ರಸ್ತೆ ದ್ವಿಪಥ ಕಾಮಗಾರಿಗೆ ೧೦ ಕೋಟಿ, ಅಂಪಾರು, ಶಂಕರನಾರಾಯಣ, ಈಡೂರು, ಹಾಲ್ಕಲ್ ರಸ್ತೆ ಅಗಲೀಕರಣ ಹಾಗೂ ವೃತ್ತ ರಚನೆಗೆ ೧೨ ಕೋಟಿ, ಕ್ಷೇತ್ರ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚಿಕ್ಕ ಹಳ್ಳ ದಾಟಲು ೭೯ ಕಾಲು ಸಂಕ ರಚನೆಗೆ ೪ ಕೋಟಿ, ಮೇಕೋಡು-ಚಾಟಕುಳಿ, ನಾಗೂರು-ಹಳಗೇರಿ ರಸ್ತೆ, ಕೆಪ್ಪೆಕೆರೆ-ಹೊರ್ಲಿಮಕ್ಕು-ಹೊಸಾಡು, ಬಂಡಾರಕೇರಿ, ಹೇರಂಜಾಲು- ದಾರಿಮಕ್ಕಿ, ವಸ್ರೆ-ಹುಲ್ಕಡ್ಕಿ, ಗೋಳಿಬೇರು-ಅತ್ಯಾಡಿ, ನಾಯ್ಕನಕಟ್ಟೆ -ಹೊಸ್ಕೋಟೆ, ಶಾಂತೇರಿ ರಸ್ತೆ ಮತ್ತು ಸೇತುವೆಗೆ ೭.೮೦ ಕೋಟಿ, ಯಡಮೊಗೆ ಸೇತುವೆ ಮತ್ತು ರಸ್ತೆ, ಗಂಗನಾಡು ಒಣಕೊಡ್ಲು ರಸ್ತೆ, ಉಪ್ರಳ್ಳಿ ರಸ್ತೆ, ಮರವಂತೆ ಸಾಧನಾ ಮಾರ್ಗ, ಅಂಪಾರು ಶಾನ್ಕಟ್ಟು, ಬೆಳ್ಳಾ ಸೇತುವೆ ಸೇರಿದಂತೆ ೨೦ಕೋಟಿ, ಕೆರ್ತೂರು, ಉಳ್ಳೂರು೧೧, ಗುಜ್ಜಾಡಿ-ಮುಳ್ಳಿಕಟ್ಟೆ, ನಾಡ, ಕಿರಿಮಂಜೇಶ್ವರ ರಸ್ತೆಗೆ ೨.೮೦ ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯಿಂದ ಮರವಂತೆ, ನಾಗೂರು, ನಾವುಂದ, ಕಾನ್ಕಿ, ಉಪ್ಪಿನಕುದ್ರು, ಕೊಲ್ಲೂರು ಸೇರಿದಂತೆ ಅನೇಕ ಭಾಗದಲ್ಲಿ ಕಿಂಡಿಅಣೆಕಟ್ಟು ಹಾಗೂ ನದಿ ದಂಡೆ ಸಂರಕ್ಷಣಾ ಕಾಂಗಾರಿಗೆ ೩೮.೪೨ ಕೋ. ಮಂಜೂರಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ, ಮೀನುಗಾರಿಕೆ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಟಾಸ್ಕ್‌ಪೋರ್ಸ್ ತುರ್ತು ಕುಡಿಯುವ ನೀರಿನ ಯೋಜನೆಗೆ ಮತ್ತು ಪ್ರವಾಹ ನಿಧಿಯಡಿ ೭.೨೦ ಕೋಟಿ, ಕಲ್ಯಾಣ್ಕಿ-ಕುಂಜಳ್ಳಿ, ಹೆನ್ನಾಬೈಲು ಸೇತುವೆ, ಕರ್ಕುಂಜೆ, ಹೊಸಂಗಡಿ ಸೇತುವೆಗೆ ೨.೨೦ ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಬೈಂದೂರು-ವಿರಾಜಪೇಟೆ ರಾಷ್ಟ್ರೀಯ ಹೆದ್ದಾರಿ ದುರಸ್ತೆ ಹಾಗೂ ಅಗಲೀಕರಣಕ್ಕೆ ೨೦ ಕೋಟಿ, ಹರ್ಕೂರು-ನಾಡ ರಸ್ತೆಗೆ ೧ ಕೋಟಿ, ತ್ರಾಸಿ-ಮೇಲ್‌ಗಂಗೊಳ್ಳಿ, ಮಡಿಕಲ್-ಕರ್ಕಿಕಳಿ, ಶಿರೂರು- ಅಳ್ವಗದ್ದೆ ರಸ್ತೆಗೆ ೩.೪೦ ಕೋಟಿ ರೂ., ಬಿಡುಗಡೆಯಾಗಿದ್ದು, ಸಮುದ್ರ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಕೊಲ್ಲೂರು ದೇವಳದ ಸುತ್ತಲಿನ ರಸ್ತೆಗೆ ೩ಕೋಟಿ, ಶಂಕರನಾರಾಯಣ, ಹೊಸಂಗಡಿ, ನಾವುಂದ ಕಾಲೇಜುಗಳಿಗೆ ೪ ಕೋಟಿ, ತಲ್ಲೂರು-ಪಾರ್ಥಿಕಟ್ಟೆ, ಹಕ್ಲಾಡಿ ಆಲೂರು, ಸಿದ್ದಾಪುರ ಮಾರ್ಲಾಡಿ, ಕಮಲಶಿಲೆ ರಸ್ತೆಡಾಂಬರೀಕರಣಕ್ಕೆ ೨ ಕೋಟಿ ಬಿಡುಗಡೆಯಾಗಿದೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ, ಬೈಂದೂರಿನಲ್ಲಿ ಮಿನಿ ವಿಧಾನಸೌಧ ರಚನೆ, ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆ ಸೇರದಂತೆ ಹತ್ತಾರು ಬೇಡಿಕೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ, ಬಿಜೆಪಿ ರಾಷ್ಟ್ರಾಧ್ಯಕ್ಷ ರ ಸೂಚನೆಯಂತೆ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಎಂಬ ಘೋಷ ವಾಕ್ಯದೊಂದಿಗೆ ಪಕ್ಷದ ಎಲ್ಲಾ ನಾಯಕರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯ ಮಾಡಲಾಗುತ್ತಿದೆ, ಫೆ. ೨೬ರಂದು ಸಂಜೆ ೭ ಗಂಟೆಗೆ ಕ್ಷೇತ್ರದ ಸುಮಾರ ೫೦ ಸಾವಿರ ಕೇಂದ್ರ ಸರ್ಕಾರದ ಫಲಾನುಭವಿಗಳ ನಿವಾಸದಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ. ಫೆ. ೨೮ ರಂದು ಸಂಘಟನೆ ಸಂವಾದ ಸೇರಿದಂತೆ ಯುವಮೋರ್ಚಾದಿಂದ ಕಮಲಾ ಕಫ್ ಕ್ರೀಡಾಕೂಟ ಹಾಗೂ ಮಾ. ೨ರಂದು ಬೈಕ್ ರ‍್ಯಾಲಿಯ ಮೂಲಕ ಕೇಂದ್ರ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಶೋಭಾ ಪುತ್ರನ್, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, , ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ, ಮುಖಂಡರಾದ ಸದಾಶಿವ ಪಡುವರಿ, ಅನಿತಾ, ದೀಪಾ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಗಿರೀಶ ಬೈಂದೂರು, ರಾಘವೇಂದ್ರ ನೆಂಪು, ಸದಾಶಿವ ಕಂಚುಗೋಡು ಉಪಸ್ಥಿತರಿದ್ದರು.