ಕುಂದಾಪ್ರ ಡಾಟ್ ಕಂ ಸುದ್ದಿ.
ಕುಂದಾಪುರ: ಮುಂದಿನ ಹತ್ತು ದಿನಗಳೊಳಗೆ ಭಾರತೀಯ ಜನತಾ ಪಕ್ಷದ ಚುನಾವಣಾ ಪೂರ್ವ ಸಿದ್ಧತೆಯಾಗಿ ಹಮ್ಮಿಕೊಳ್ಳಲಾಗುತ್ತಿರುವ ನಾಲ್ಕೈದು ಕಾರ್ಯಕ್ರಮಗಳನ್ನು ನಡೆಸಬೇಕಾಗಿದ್ದು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಸಕ್ರಿಯರಾಗಬೇಕು ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆಕೊಟ್ಟರು.
ಭಾರತೀಯ ಜನತಾ ಪಕ್ಷದ ಮಹಾ ಸಂಪರ್ಕ ಅಭಿಯಾನವನ್ನು ಕುಂದಾಪುರದಲ್ಲಿ ಭಾನುವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಚಾಲನೆಗೊಳಿಸಿ ಬಳಿಕ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ದೇಶಾದ್ಯಂತ ನಿಗಧಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಏಕಕಾಲದಲ್ಲಿ ನಡೆಯುವಂತೆ ಸೂಚಿಸಲಾಗಿದೆ. ಅದರಂತೆ ಫೆಬ್ರವರಿ ೨೬ರಂದು ಸಂಜೆ ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ’ಕಮಲಜ್ಯೋತಿ’ಯನ್ನು ಬೆಳಗಿಸಬೇಕು ಮತ್ತು ಅದರ ಫೋಟೋ ತೆಗೆದು ಪಕ್ಷದ ಕಚೇರಿಗೆ ಕಳುಹಿಸಬೇಕು. ಫೆಬ್ರುವರಿ ೨೮ರಂದು ನರೇಂದ್ರ ಮೋದಿಯವರು ವಿಡಿಯೋ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಅವರನ್ನು ನೋಡುವ ಅವಕಾಶವನ್ನು ಮತದಾರರು ಬಳಸಿಕೊಳ್ಳಲು ಕ್ರಮ, ಮಾರ್ಚ್ ೨ರಂದು ದೇಶಾದ್ಯಂತ ಯುವ ಮೋರ್ಚಾ ಯುವಕರಿಂದ ಮೋಟಾರ್ ಬೈಕ್ ರ‍್ಯಾಲಿ ನಡೆಯಲಿದ್ದು, ನಿಮ್ಮ ನಿಮ್ಮ ಬೂತ್ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷೆಯನ್ನಾಗಿ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷೆ ಗುಣರತ್ನ ಅವರನ್ನು ಘೋಷಿಸಲಾಯಿತು. ಶೋಭಾ ಕರಂದ್ಲಾಜೆ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಬಿಜೆಪಿಯ ಕ್ಷೇತ್ರ ಸಮಿತಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಸದಾನಂದ ಬಳ್ಕೂರು, ಕಿರಣ್ ಕೊಡ್ಗಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜೀ ಅಧ್ಯಕ್ಷ ಗಣಪತಿ ಟಿ ಶ್ರೀಯಾನ್, ಜಿ.ಪಂ. ಸದಸ್ಯೆ ಶ್ರೀಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು,
ಶೋಭಾ ಗೋಬ್ಯಾಕ್: ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಶೋಭ ಗೋಬ್ಯಾಕ್ ಅಭಿಯಾನದ ಬಗ್ಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಶೋಭಾ ಗೋ ಬ್ಯಾಕ್ ಅಭಿಯಾನದ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೂ ಬೆರಳೆಣಿಕೆಯ ಮಂದಿ ಇದನ್ನು ಹೇಳುತ್ತಿರಬಹುದು. ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವವರು ಕೆಲವರು ಇಂತಹಾ ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರು ಅಭ್ಯರ್ಥಿಯಾಗುತ್ತಾರೆ. ನಾನು ಮಹಿಳೆಯಾಗಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತು ಎಂದು ಪ್ರತಿಕ್ರಿಯಿಸಿದರು.