Kundapra.com ಕುಂದಾಪ್ರ ಡಾಟ್ ಕಾಂ

ರಂಗಭೂಮಿಯಿಂದ ಬದುಕಿನ ಪಾಠ: ಜ್ಯೋತಿಷಿ ಮಹೇಂದ್ರ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಲ್ಲೂ ಸಹೃದಯಿ ಮನೋಭಾವ ಬೆಳೆದಿರುತ್ತದೆ. ಕಲಾವಿದ ಕಲೆಯಲ್ಲಿನ ಸದ್ಗುಣಗಳನ್ನು ಬದುಕಿನಲ್ಲಿಯೂ ಅಳವಡಿಸಿಕೊಂಡು ಬೆಳೆಯುತ್ತಾನೆ ಎಂದು ಜ್ಯೋತಿಷಿ ಮಹೇಂದ್ರ ಭಟ್ ಬೈಂದೂರು ಹೇಳಿದರು.

ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಶನಿವಾರ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವದಲ್ಲಿ ನಟ ನಿರ್ದೇಶಕ ರಾಜೇಂದ್ರ ಕಾರಂತರ ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ರಂಗಭೂಮಿಯಿಂದ ಪ್ರತಿಯೊಬ್ಬರೂ ಬದುಕಿನ ಪಾಠಗಳನ್ನು ಕಲಿಯುತ್ತಾರೆ. ಪ್ರೌಡಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ಅಂತವರು ಸಮಾಜದಲ್ಲಿಯೂ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಎಂದರು.

ಲಾವಣ್ಯದ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಇಂಜಿನಿಯರ್ ಗುರುರಾಜ್ ರಾವ್ ಶುಭಾಶಂಸನೆಗೈದರು. ರಂಗ ಕಲಾವಿದ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ತುಮಕೂರು ಬ್ಯೂರೋ ಮುಖ್ಯಸ್ಥ ಎನ್. ಸಿದ್ದೇಗೌಡ ತುಮಕೂರು, ಉದ್ಯಮಿ ರಾಮ ಸೋಡಿತಾರ್, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು, ಅರಣ್ಯ ಇಲಾಖೆಯ ಜನಾರ್ದನ ಪಟ್ವಾಲ್, ಲಾವಣ್ಯ ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ಯ, ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ಉಪಸ್ಥಿತರಿದ್ದರು.

ಲಾವಣ್ಯದ ಮುಖ್ಯ ಸಲಹೆಗಾರ ಗಿರೀಶ್ ಬೈಂದೂರು ಸ್ವಾಗತಿಸಿ, ಲಾವಣ್ಯ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ವಂದಿಸಿದರು. ಚೈತ್ರಾ ಯಡ್ತರೆ ಸನ್ಮಾನಿತರ ಪರಿಚಯ ವಾಚಿಸಿದರು. ದಿನೇಶ್ ಆಚಾರ್ಯ ಚೆಂಪಿ ಕಾರ್ಯಕ್ರಮ ನಿರೂಪಿಸಿದರು.

 

Exit mobile version