Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ಬೈಂದೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಜಯ ಬ್ಯಾಂಕ್ ಬೈಂದೂರು ಶಾಖೆಯ ಎದುರು ಪ್ರತಿಭಟನೆ ಜರುಗಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಷ್ಟದಲ್ಲಿರುವ ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾವನ್ನು ಲಾಭದಾಯಕವಾಗಿ ನಡೆಯುತ್ತಿರುವ ವಿಜಯ ಬ್ಯಾಂಕಿನೊಂದಿಗೆ ವಿಲೀನಗೊಳಿಸುತ್ತಿರುವುದು ಅಕ್ಷಮ್ಯ. ವಿಜಯಾ ಬ್ಯಾಂಕ್ ಕರಾವಳಿಯ ಹೆಮ್ಮೆ ಎನ್ನುವುದನ್ನು ಮರೆಯುವಂತಿಲ್ಲ. ಕೋಟಿ ಕೋಟಿ ಸಾಲ ನೀಡಿ ಓಡಿ ಹೋದ ಉದ್ಯಮಿಯಿಂದಾದ ಆರ್ಥಿಕ ನಷ್ಟದ ಹೊರೆಯನ್ನು ತಗ್ಗಿಸಿಕೊಳ್ಳಲು ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದರು.

ಕೇಂದ್ರ ಸರಕಾರ ಮಾಡುತ್ತಿರುವ ಜನವಿರೋಧಿ ಕೆಲಸಗಳನ್ನು ವಿಪಕ್ಷ ಟೀಕೆ ಮಾಡಿದರೆ ಅದು ದೇಶದ್ರೋಹದ ಕೆಲಸ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರಸ್ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ದೇವಾಡಿಗ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರುಗಳಾದ ನಾಗರಾಜ ಗಾಣಿಗ, ಗಣೇಶ ಪೂಜಾರಿ, ಉಮೇಶ್ ದೇವಾಡಿಗ, ಆನಂದ ಶೆಟ್ಟಿ, ರಾಜೇಶ್ ದೇವಾಡಿಗ, ಪಕ್ಷದ ಪ್ರಮುಖರಾದ ಮೋಹನ ಪೂಜಾರಿ ಉಪ್ಪುಂದ, ಮಣಿಕಂಠ ದೇವಾಡಿಗ, ಸುಬ್ರಹ್ಮಣ್ಯ ಪೂಜಾರಿ, ತಬ್ರೇಜ್ ನಾಗೂರು, ಸನತ್ ಕೊಲ್ಲೂರು ಮೊದಲಾದವರು ಇದ್ದರು.

Exit mobile version