Kundapra.com ಕುಂದಾಪ್ರ ಡಾಟ್ ಕಾಂ

ಚೋಮನ ದುಡಿ ರಂಗಪ್ರಯೋಗ ನಟರ ನಾಟಕವಾಗಿ ಉಳಿದಿದೆ: ಐ. ಕೆ. ಬೋಳುವಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋಟ ಶಿವರಾಮ ಕಾರಂತ ಕಾದಂಬರಿಯ ಪ್ರತಿ ವಾಕ್ಯ, ವಿಸ್ತಾರಗಳು ನಾಡಿನ ಜನರ ಕಷ್ಟ-ಸುಖ ಹಾಗೂ ಸಾಂಸ್ಕೃತಿಕ ಲೋಕವನ್ನು ತೆರೆದಿಡುವ ಕೆಲಸ ಮಾಡಿದೆ. ಅವರ ಕೃತಿ ಚೋಮನ ದುಡಿ ರಂಗಪ್ರಯೋಗ ಕಂಡುಕೊಂಡಾಗಲೆಲ್ಲಾ ಅದು ನಟರ ನಾಟಕವಾಗಿ ಉಳಿದಿದೆ ಎಂದು ರಂಗಭೂಮಿ ಹಾಗೂ ಶಿಕ್ಷಣ ಚಿಂತನ ಪುತ್ತೂರಿನ ಐ. ಕೆ. ಬೋಳುವಾರು ಹೇಳಿದರು.

ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ – ೨೦೧೯ ತ್ರಿದಿನ ನಾಟಕೋತ್ಸವವನ್ನು ಬಾಲ ಕಲಾವಿದ ಪ್ರೀತಮ್ ಮುಖಕ್ಕೆ ಬಣ್ಣ ಹಚ್ಚಿ ಉದ್ಘಾಟಿಸಿ ಮಾತನಾಡಿದರು.

ಚೋಮನ ದುಡಿ ಯಾವತ್ತಿಗೂ ಆಸೆಯನ್ನು ಹೇಳಿಕೊಳ್ಳುವ ರೂಪಕವಾಗಿ ಉಳಿಯುತ್ತದೆ. ಚೂಮನಿಗೆ ಭೂಮಿಯ ಮೇಲೆ ಆಸೆ ಇದ್ದರೇ, ರಂಗಕಲಾವಿದರಿಗೆ ಕಲಾಗ್ರಾಮದ ಆಗಬೇಕು ಎಂಬ ಆಸೆ ಇದೆ. ಅದು ಸಾಕಾರಗೊಳ್ಳಲಿ ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಸುರಭಿ ಸಂಸ್ಥೆ ರಂಗಚಟುವಟಿಕೆಗಳ ಜತೆಗೆ ಭಾರತೀಯ ಸಾಂಸ್ಕೃತಿಕ ವೈವಿಧ್ಯವನ್ನು ಯುವ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಾಹಿತ್ಯ ಕೃತಿಗಳು ರಂಗದ ಮೇಲೆ ಬಂದಾಗ ಅದಕ್ಕೆ ಜೀವ ಬರುತ್ತದೆ ಎಂಬ ಮಾತಿದೆ. ಚೋಮನ ದುಡಿಯೂ ಸುರಭಿ ಕಲಾವಿದರ ಮೂಲಕ ಮತ್ತೆ ಜೀವ ಪಡೆದಿದೆ ಎಂದರು.

ಯಡ್ತರೆ ಗ್ರಾ.ಪಂ ಅಧ್ಯಕ್ಷೆ ಮೂಕಾಂಬು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬೈಂದೂರು ಜೀವವಿಮಾ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಶರಬೇಂದ್ರ ಸ್ವಾಮಿ, ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ, ಪತ್ರಕರ್ತರಾದ ಮೌನೇಶ್ ವಿಶ್ವಕರ್ಮ, ಅರುಣಕುಮಾರ್ ಶಿರೂರು, ಉದ್ಯಮಿ ಮೋಹನ ರೇವಣ್ಕರ್, ಸುರಭಿ ಉಪಾಧ್ಯಕ್ಷ ಆನಂದ ಮದ್ದೋಡಿ ಉಪಸ್ಥಿತರಿದ್ದರು.

ರಂಗಕರ್ಮಿ ಐ. ಕೆ. ಬೋಳುವಾರು ಪುತ್ತೂರು ಅವರಿಗೆ ಕಲಾವಿರದ ಕೋಟು, ಪೇಟ, ಚೀಲ ತೊಡಿಸಿ, ಪುಸ್ತಕ ನೀಡಿ ಸನ್ಮಾನಿಸಲಾಯಿತು.

ಸುರಭಿ ರಿ. ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಕಾಲ್ತೋಡು ಸನ್ಮಾನಿತರ ಪರಿಚಯ ವಾಚಿಸಿದರು. ವಾಸುದೇವ ಪಡುವರಿ ಅತಿಥಿಗಳಿಗೆ ಶಾಲು ಹೊದಿಸಿದರು. ಅಧ್ಯಕ್ಷ ಸತ್ಯನಾ ಕೊಡೇರಿ ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ರಾಘವೇಂದ್ರ ಕೆ. ಪಡುವರಿ ಹಾಗೂ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ನಾಟಕೋತ್ಸವದ ಮೊದಲ ದಿನ ಸುರಭಿ ಬೈಂದೂರು ಪ್ರಸ್ತುತಿಯ ಗಣೇಶ್ ಎಂ. ಉಡುಪಿ ನಿರ್ದೇಶನದ ’ಚೋಮನ ದುಡಿ’ ನಾಟಕ ಪ್ರದರ್ಶನಗೊಂಡಿತು.

Exit mobile version