Kundapra.com ಕುಂದಾಪ್ರ ಡಾಟ್ ಕಾಂ

ಪ್ರಾಕೃತಿಕ ವಿಕೋಪ ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ

ಕುಂದಾಪುರ: ತಾಲೂಕಿನಲ್ಲಿ ಮಳೆಗಾಲದ ಸಮಯದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಸಂತ್ರಸ್ಥರಿಗಾಗಿ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ಕೊಠಡಿಯನ್ನು ಪ್ರಾರಂಭಿಸಿ ದಿನದ 24 ಗಂಟೆಗಳ ಕಾಲ ಕಂದಾಯ ಇಲಾಖೆಯ ಹಾಗೂ ಇತರ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಸಿಕೊಂಡು ಕಾರ್ಯಾಚರಿಸುವಂತೆ ಮಾಡಲು ತಯಾರಿ ನಡೆಸಿದ್ದು ಪ್ರಾಕೃತಿಕ ವಿಕೋಪ ಸಂಭವಿಸಿದಾಗಿ ಕೂಡಲೇ ಈ ಕಂಟ್ರೋಲ್ ಕೊಠಡಿಗಳಿಗೆ ಮಾಹಿತಿ ನೀಡಬಹುದಾಗಿದೆ. ಜಿಲ್ಲಾಡಳಿತ ಸಂತೃಸ್ತರಿಗೆ 24 ಗಂಟೆಗಳ ಒಳಗೆ ಪರಿಹಾರ ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಿರುವುದರಿಂದ ನಷ್ಟ ಸಂಭವಿಸಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಾಥಮಿಕ ಅಂದಾಜು ವರದಿಯನ್ನು ನೀಡಬೇಕು ಹಾಗೂ 24 ಗಂಟೆಗಳ ಒಳಗೆ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ನಷ್ಟದ ಒಟ್ಟು ಪ್ರಮಾಣದ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ವಿಳಂಭವಾಗಿ ಬಂದ ವರದಿಗಳನ್ನು ಪರಿಗಣಿಸಲಾಗುವುದಿಲ್ಲ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ತಿಳಿಸಿದರು.

ಅವರು ಮಳೆಗಾಲದಲ್ಲಿ ಎದುರಾಗುವ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಅನೂಕೂಲವಾಗುವಂತೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ನಿರ್ದೇಶನವಿತ್ತರು.

ಪೊಲೀಸ್, ಗೃಹ ರಕ್ಷಕ ದಳ, ಆರೋಗ್ಯ, ತಾಲ್ಲೂಕು ಪಂಚಾಯಿತಿ, ಮೆಸ್ಕಾಂ, ಪುರಸಭೆ ಹಾಗೂ ಬಂದರು ಇಲಾಖೆಗಳನ್ನು ಸನ್ನದು ಸ್ಥಿತಿಯಲ್ಲಿ ಇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ನೆರೆ ಬರುವ ತಾಲ್ಲೂಕಿನ ವಿವಿಧ ಭಾಗಗಳನ್ನು ಗುರುತಿಸಿ ವಲಯವಾರಾಗಿ ವಿಭಾಗಿಸಿ ಆ ವ್ಯಾಪ್ತಿಂiiಲ್ಲಿ ಬರುವ ಗ್ರಾಮಗಳಲ್ಲಿ ನೆರೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸಲು ಹಾಗೂ ಕಾರ್ಯಾಚರಣೆ ನಡೆಸಲು ಅನೂಕೂಲವಾಗುವಂತೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಒಂದು ಆಶ್ರಯ ತಾಣಗಳನ್ನು ಗುರುತಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ನೀರುಗಳಿಂದಾಗಿ ಉಂಟಾಗುವ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‌ಗೂನ್ಯ ಮುಂತಾದ ರೋಗಗಳ ತಡೆ ಹಾಗೂ ಮುಂಜಾಗ್ರತೆಗಾಗಿ ತಾಲ್ಲೂಕು ಆರೋಗ್ಯ ಇಲಾಖೆ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ ಅವರು ಈ ಕುರಿತು ಸರ್ಕಾರದ ವಿವಿಧ ಇಲಾಖೆಯೊಡನೆ ಸಮನ್ವಯ ಇಟ್ಟುಕೊಳ್ಳುವಂತೆ ಸೂಚಿಸಿದರು.

ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಕೃತಕ ಹಳ್ಳಗಳಿಗೆ ಕಾರಣವಾಗಿರುವ ಕಲ್ಲು ಕೋರೆ ಹಾಗೂ ಕೊಜೆ ಹೊಂಡಾಗಳಿಗೆ ಮಕ್ಕಳು ಬಿದ್ದು ಜೀವ ಹಾನಿ ಉಂಟಾಗುವುದನ್ನು ತಪ್ಪಿಸಲು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ ಅವರು ಖಾಸಗಿ ಜಾಗಗಳಿದ್ದಲ್ಲಿ ಸಂಬಂಧಿಸಿದವರಿಂದ ತಡೆಬೇಲಿ ಹಾಕಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಆಕಸ್ಮಿಕವಾಗಿ ಎರಗುವ ಸಿಡಿಲಿನಿಂದ ಉಂಟಾಗುವ ಭಾರಿ ಅನಾಹುತಗಳನ್ನು ತಪ್ಪಿಸಲು ಅನೂಕೂಲವಾಗುವಂತೆ ತೆಗೆದುಕೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ಮಾಧ್ಯಮಗಳ ಮೂಲಕ ಜನರಿಗೆ ತಿಳುವಳಿಕೆ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ಹಾಗೂ ಗೃಹ ರಕ್ಷಕ ದಳ ಜಿಲ್ಲಾ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಯವರು ನೆರೆ ಬಂದಾಗ, ಮಣ್ಣು ಹಾಗೂ ಕಟ್ಟಡ ಕುಸಿತ ಹಾಗೂ ಇತರ ಅನಾಹುತಗಳು ಸಂಭವಿಸಿದಾಗ ತಕ್ಷಣ ರಕ್ಷಣಾ ಕಾರ್ಯ ಮಾಡಲು ಅನೂಕೂಲವಾಗುವಂತೆ ದೋಣಿ, ಅರ್ಥ ಮೂವರ‍್ಸ್ ಹಾಗೂ ಹೆಚ್ಚುವರಿ ಸಿದ್ದತಾ ವಾಹನಗಳನ್ನು ಇರಿಸಿಕೊಳ್ಳುವ ಕುರಿತು ಸಲಹೆ ನೀಡಿದರು. ಗಂಜಿ ಕೇಂದ್ರಗಳ ಕುರಿತು ಮಾತನಾಡಿದ ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಕೆ.ಸೀತಾರಾಮ ಶೆಟ್ಟಿಯವರು ತುರ್ತು ಗಂಜಿ ಕೇಂದ್ರಗಳನ್ನು ಆರಂಭಿಸಲು ಅನೂಕೂಲವಾಗುವಂತೆ ಕೇಂದ್ರಗಳನ್ನು ಗುರುತಿಸಲಾಗಿದೆ, ಆಹಾರ ಹಾಗೂ ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ‍್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಬೈಂದೂರು ವಿಶೇಷ ತಹಸೀಲ್ದಾರ್ ಕಿರಣ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಿದಾನಂದ ಸಂಜು, ವಲಯಾರಣ್ಯಾಧಿಕಾರಿ ಲೋಹಿತ್, ಕುಂದಾಪುರ ವಲಯ ಶಿಕ್ಷಾಣಾಧಿಕಾರಿ ಶೋಭಾ ಎಸ್ ಶೆಟ್ಟಿ, ಹಿರಿಯ ತೋಟಗಾರಿಕಾ ಆಧಿಕಾರಿ ಚಿದಂಬರಂ, ತಾಲ್ಲೂಕು ಶಿಶು ಅಭಿವೃದ್ದಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸದಾನಂದ ನಾಯಕ್, ಮೆಸ್ಕಾಂ ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ಯಶವಂತ್, ಕಾರ್ಮಿಕ ಇಲಾಖೆಯ ಅಧಿಕಾರಿ ಸತ್ಯನಾರಾಯಣ, ಗಂಗೊಳ್ಳಿ ಎಸ್.ಐ ಸುಬ್ಬಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ರಾವ್, ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ರವೀಂದ್ರ ಶೆಟ್ಟಿ, ಪಶು ಸಂಗೋಪನಾ ಅಧಿಕಾರಿ ಡಾ.ದಿವಾಕರ್ ಸಭೆಯಲ್ಲಿ ಇದ್ದರು.

Exit mobile version