Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ವಿದಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಉಡುಪಿ ಜಿಲ್ಲೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ದೊರೆಯಿತು. ವಿದ್ಯಾರ್ಥಿಗಳು ಹೊಸಬಸ್ ನಿಲ್ದಾಣ ತನಕ ತೆರಳಿ ಅಲ್ಲಿಂದ ಶಾಸ್ತ್ರೀವೃತ್ತಕ್ಕೆ ಮೆರವಣಿಯ ಮೂಲಕವೇ ಮರಳಿ ಮೈದಾನಕ್ಕೆ ಹಿಂತಿರುಗಿ ದಾರಿಯುದ್ದಕ್ಕೂ ಮತದಾನದ ಅರಿವು ಮೂಡಿಸಿದರು.

ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಎಸಿ ಡಾ. ಮಧುಕೇಶ್ವರ್ ಮಾತನಾಡಿ ನಾವೆಲ್ಲರೂ ನಮ್ಮ ಹಕ್ಕು ಕೇಳುತ್ತೇವೆ. ಹಾಗೆ ಅದರೊಟ್ಟಿಗೆ ನಮ್ಮ ಕರ್ತವ್ಯಗಳೂ ಇವೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತಾದರರು ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಬೇಕು ಎಂದರು.

ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿರಣ್ ಫೆಡ್ನೇಕರ್, ತಹಶೀಲ್ದಾರ್ ವಿಜಯೇಂದ್ರ ಬಾಡ್ಕರ್, ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ ಉಡುಪ, ಯುವಜನಸೇವಾ ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ರಾಘವೇಂದ್ರ, ಸ್ವೀಪ್ ಸಂಪರ್ಕಾಧಿಕಾರಿ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ದಿನಾಕರ್ ಶೆಟ್ಟಿ, ಸುಬ್ರಹ್ಮಣ್ಯ ಜೋಶಿ, ವಡೇರಹೋಬಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಜಾಥಾದಲ್ಲಿ ಭಂಡಾರ್ಕಾರ‍್ಸ್ ಕಾಲೇಜು, ಪಡುಕೆರೆ ಲಕ್ಷ್ಮೀಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು, ಸರೋಜಿನಿ ಮಧುಸೂಧನ ಡಿಕುಶೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಪಡುಕೆರೆ ಲಕ್ಷ್ಮೀಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತದಾನ ಜಾಗೃತಿ ಗೀತೆಯನ್ನು ಹಾಡಿದ್ದು, ರ‍್ಯಾಲಿಯೂದಕ್ಕೂ ಚಂಡೆ ವಾದನ ಮೊಳಗಿಸಿ ಜಾಥಾಕ್ಕೆ ಮೆರಗು ತಂದರು.

Exit mobile version