ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಮತದಾನ ಜಾಗೃತಿ ಜಾಥಾ ಪಕ್ಷದ ಪ್ರಚಾರ ವೇದಿಯಾಗಿ ಮಾರ್ಪಟ್ಟು, ಅಧಿಕಾರಿಗಳಿಗೆ ಇರಿಸುಮುರಿಸಾದ ಪ್ರಸಂಗವೊಂದು ನಡೆದಿದೆ.
ಕುಂದಾಪುರ ಗಾಂಧಿ ಮೈದಾನಕ್ಕೆ ಬರುವಾಗಲೇ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಮೋದಿ ಪರ ಘೋಷಣೆ ಕೂಗುತ್ತಲೇ ಆಗಮಿಸಿದ್ದರು. ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧನೆಗೂ ಮುನ್ನಾ ಸೇರಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಯಾರೋ ಚಿಕ್ಕದಾಗಿ ಉಚ್ಛರಿಸಿದ ಮೋದಿ ಹೆಸರಿಗೆ ನೂರಾರು ವಿದ್ಯಾರ್ಥಿಗಳ ಸ್ವರದ ಮೂಲಕ ಶಕ್ತಿ ತುಂಬಿದರು.
ಗಾಂಧಿ ಮೈದಾನದಿಂದ ಹೊರಟ ಜಾಥಾ ಉದ್ದಕ್ಕೂ ಹೌವ್ ಈಸ್ ದ ಜೋಶ್.. ಪದೇ ಪದೇ ಪುನರಾವರ್ತನೆ ಆಗಿ, ದೊಡ್ಡ ಸ್ವರದ ಪ್ರತಿಕ್ರಿಯೆ ಕೂಡಾ ಸಿಕ್ಕಿತು. ವಂದೇ ಮಾತರಂ ಉದ್ಘೋಷ ನಿರಂತರವಾಗಿ ಕೇಳಿ ಬಂತು. ಮತದಾನದ ಜಾಗೃತಿ ಮೂಡಿಸುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ, ಉರಿ ಸಿನಿಮಾದ ಡೈಲಾಗ್, ಮೋದಿ ಬಗ್ಗೆ ಘೋಷಣೆ ಕೂಗಿ ಅಚ್ಚರಿ ಮೂಡಿಸಿದರು. ಕಾರ‍್ಯಕ್ರಮ ಸಂಘಟಿಕರಿಗೂ ಇರಿಸು ಮುರಿಸು ತರಿಸಿದ್ದು, ಅತ್ತ ಉಗಿಯಲೂ ಆಗದೆ, ಇಂತ ನುಂಗಲಾಗದೆ ಇಕ್ಕಟ್ಟಿಗೆ ಸಿಕ್ಕಿದ್ದು ಸುಳ್ಳಲ್ಲ.