Kundapra.com ಕುಂದಾಪ್ರ ಡಾಟ್ ಕಾಂ

ಡಾ. ಗಾಯತ್ರೀ ನಾವಡರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಾರಿಯ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಯನ್ನು ಖ್ಯಾತ ಸಾಹಿತಿ ಡಾ. ಗಾಯತ್ರೀ ನಾವಡರಿಗೆ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ೨೫,೦೦೦ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಸ್ತ್ರೀವಾದಿ ಚಿಂತಕಿಯಾಗಿ, ಸಂಸ್ಕೃತಿ ವಿಮರ್ಶಕಿಯಾಗಿ, ಜಾನಪದ ವಿದ್ವಾಂಸರಾಗಿ ಡಾ. ಗಾಯತ್ರೀ ನಾವಡರದು ವಿಶಿಷ್ಟ ಹೆಸರು. ‘ಕಾಡ್ಯನಾಟ’. ‘ಭಾರತೀಯ ಸ್ತ್ರೀವಾದ’, ಮಹಿಳಾ ಸಾಂಸ್ಕೃತಿಕ ಸಬಲೀಕರಣ, ಸ್ತ್ರೀವಾದಿ ಜಾನಪದದಂತಹ ಹೊಸ ಶೋಧಗಳನ್ನು, ಪರಿಕಲ್ಪನೆಗಳನ್ನು ಸಂಶೋಧನ ಲೋಕಕ್ಕೆ ನೀಡಿದವರು. ಬಂಧುತ್ವ ವ್ಯವಸ್ಥೆ ಮತ್ತು ಪಠ್ಯದ ಅಂತರ್ ಸಂಬಂಧವನ್ನು ಕುರಿತು ಸಂಕಥನವನ್ನು ಕಟ್ಟಿಕೊಟ್ಟವರು. ಕರಾವಳಿಯ ಮಾತೃರೂಪಿ ಸಂಸ್ಕೃತಿಯ ತುಳು, ಕನ್ನಡ ಮೌಖಿಕ ಪರಂಪರೆಯ ಬಗೆಗೆ ಸ್ತ್ರೀವಾದಿ ದೃಷ್ಟಿಕೋನದಿಂದ ಸಂಶೋಧನೆ ನಡೆಸಿದ ಮೊದಲಿಗರು. ಅದು ಪ್ರಕಟಿಸುವ ಸ್ತ್ರೀತ್ವದ ಶೋಧನ ಮೂಲಕ ಪಾಶ್ಚಾತ್ಯ ಸ್ತ್ರೀವಾದವನ್ನು ಮುರಿದು ಭಾರತೀಯ ಸ್ತ್ರೀವಾದದ ಪರಿಕಲ್ಪನೆಯನ್ನು ಕಟ್ಟಿಕೊಟ್ಟವರು. ಕನ್ನಡದ ಸಂದರ್ಭದಲ್ಲಿ ಗುಲ್ಬರ್ಗಾ(೧೯೯೬) ಹಾಗೂ ಮಣಿಪಾಲ ವಿಶ್ವವಿದ್ಯಾಲಯ (೨೦೦೪) ಗಳಿಂದ ಎರಡು ಪಿಹೆಚ್.ಡಿ. ಪಡೆದ ಹೆಗ್ಗಳಿಕೆ ಅವರದು.

Exit mobile version