ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು, ವಾಟ್ಸಪ್ ಫೇಸ್ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮತಯಾಚನೆ ಮಾಡುವುದು ಮಾದರಿ ನೀತಿ ಸಂಹಿತೆಯಂತೆ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಎದುರಿಸಬೇಕಾದ್ದರಿಂದ ಈ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ ಎಂದು ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ್‌ಕುಮಾರ್ ಹೇಳಿದರು.
ಅವರು ಗುರುವಾರ ಚುನಾವಣೆಗೆ ಪೂರ್ವಭಾವಿಯಾಗಿ ಬೈಂದೂರು ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೀಗೆ ಹೇಳಿದರು. ಚುನಾವಣೆಯ ಅಕ್ರಮಗಳನ್ನು ತಡೆಯಲು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರೂರು, ದಳಿ ಹಾಗೂ ಹೊಸಂಗಡಿ ಭಾಗದಲ್ಲಿ ಮೂರು ಚೆಕ್‌ಪೋಸ್ಟ್‌ಗಳಿದ್ದು ವಾಹನಗಳನ್ನು ತಪಾಸಣೆ ನಡೆಸುತ್ತಾರೆ. ಪ್ರೈಯಿಂಗ್ ಸ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ ದಿನದ ಎಲ್ಲಾ ಹೊತ್ತಿನಲ್ಲಿ ಕಾರ್ಯನಿರ್ವಹಿಸುತ್ತದೆ. ಚುನಾವಣೆಗೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ವಾಹನಗಳಿಗೆ ಅಂಟಿಸುವಂತಿಲ್ಲ. ಮತದಾನದ ದಿನ ಪೋಲಿಂಗ್ ಸ್ಟೇಷನ್‌ನ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುವಂತಿಲ್ಲ ಈ ಮೊದಲಾದ ಮಾಹಿತಿಗಳನ್ನು ಸಾರ್ವಜನಿಕರ ಪ್ರಶ್ನೆಗೆ ತಕ್ಕಂತೆ ನೀಡಿದರು.
ಪೊಲೀಸರಿಂದ ಮಾತ್ರ ಅಪರಾಧ ತಡೆಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅತಿ ಮುಖ್ಯವಾಗಿದೆ. ಪ್ರತಿ ಠಾಣೆಯಲ್ಲಿಯೂ ಸುಧಾರಿತ ಬೀಟ್ ವ್ಯವಸ್ಥೆ ಇದ್ದು, ಪ್ರತಿ ಗ್ರಾಮ ವ್ಯಾಪ್ತಿಯಲ್ಲಿಯೂ ಒಬ್ಬೊಬ್ಬರು ಪೊಲೀಸರು ಬೀಟ್‌ನ ಮುಖ್ಯಸ್ಥರಾಗಿರುತ್ತಾರೆ. ಸಮಸ್ಯೆಗಳಿದ್ದರೇ ಅವರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬುದು. ಪೊಲೀಸ್ ಠಾಣೆಯಲ್ಲಿ ಕೆಟ್ಟ ಕಾರಣಕ್ಕೆ ಹೆಸರು ದಾಖಲಾಗದಂತೆ ನೋಡಿಕೊಳ್ಳುವುದು ಅವಶ್ಯ. ಒಮ್ಮೆ ಹೆಸರು ಠಾಣೆಯ ದಾಖಲಾತಿಯನ್ನು ಸೇರಿದರೆ ಮತ್ತೆ ತೆಗೆಯುವುದು ಕಷ್ಟವಿದೆ ಎಂದರು.
ಬೈಂದೂರು ಪೊಲೀಸ್ ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್. ಸ್ವಾಗತಿಸಿ, ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ವಂದಿಸಿದರು.