Kundapra.com ಕುಂದಾಪ್ರ ಡಾಟ್ ಕಾಂ

ಸಂವಿಧಾನದ ಆಶಯದಂತೆ ಸರ್ಕಾರ ಕೆಲಸ ಮಾಡಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂವಿಧಾನ ತಿದ್ದುವ ಕೆಲಸ ಮಾಡದೆ, ಸಂವಿಧಾನದ ಆಶಯದಂತೆ ಸರ್ಕಾರಗಳು ಕೆಲಸ ಮಾಡಬೇಕು. ಅಂಬೇಡ್ಕರ್ ದೂರದೃಷ್ಟಿತ್ವದಲ್ಲಿ ರಚಿಸಿದ ಸಂವಿಧಾನ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತಿದ್ದು, ಅಧಿಕಾರಿಕ್ಕೆ ಬಂದ ಯಾವುದೇ ಸರ್ಕಾರವಾಗಲಿ ಅಂಬೇಡ್ಕರ್ ಆಶಯದಂತೆ ಕೆಲಸ ಮಾಡಲಿ ಎಂದು ಕುಂದಾಪುರ ಬಾರ್ ಅಸೋಶಿಯೇಶನ್ ಅಧ್ಯಕ್ಷ ಎಸ್.ನಿರಂಜನ್ ಹೆಗ್ಡೆ ಸಟ್ವಾಡಿ ಅಭಿಪ್ರಾಯಪಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನಾ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ಕುಂದಾಪುರ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಭಾನುವಾರ ನಡೆದ ಸಾಮಾಜಿಕ ಸಮಾನತಾ ಸಮಾವೇಶ ಹಾಗೂ ಸನ್ಮಾನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೇರಾವ ದೇಶದಲ್ಲೂ ಕಂಡುಬಾರದ ಶ್ರೇಷ್ಠ ಸಂವಿಧಾನ ಕೊಟ್ಟ ಅಂಬೇಢ್ಕರ್ ವಿಶ್ವ ಮಾನವರಾಗಿ ಗುರುಸಿಕೊಂಡಿದ್ದಾರೆ. ಶಿಕ್ಷಣದ ಮಹತ್ವ ಅರಿತ ಅಂಬೇಡ್ಕರ್ ತಾವು ಹತ್ತು ಹಲವು ಪದವಿ ಪಡೆಯುವ ಮೂಲಕ ಸಮಾಜ ಸುಧಾರಣೆಗೆ ಶಿಕ್ಷಣವೇ ದಾರಿ ಎಂದು ಪ್ರತಿಪಾಧಿಸಿದರು. ಶಿಕ್ಷಣದ ಮೂಲಕ ಸಮಾಜದ ವೈರುಧ್ಯ ದೂರ ಮಾಡಲು ಸಾಧ್ಯ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸಕ ಜಯಪ್ರಕಾಶ್ ಶೆಟ್ಟಿ ಉಪನ್ಯಾಸ ಮಾಡಿದರು.

ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಕುಂದಾಪುರ ಮನೀಷ್ ಆಸ್ಪತ್ರೆ ವೈದ್ಯಾಧಿಕಾರಿ ಪ್ರವೀಳಾ ನಾಯಕ್ ಮತ್ತು ನಿವೃತ್ತ ಬಿಇಒ ವಿಠಲದಾಸ್ ಬನ್ನಂಜೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಸಾಮಾಜಿಕ ಸಮಾನತಾ ಸಮಾವೇಶದಲ್ಲಿ ಉಡುಪಿ ವಿಶೇಷ ಸರ್ಕಾರಿ ಅಭಿಯೋಜಕ ಸತೀಶ್ಚಂದ್ರ ಕಾಳಾವರ್ಕರ್, ಅಪರ ಸರ್ಕಾರಿ ವಕೀಲ ಚಂದ್ರಕಾಂತ್ ಗುಜ್ಜಾಡಿ, ನೋಟರಿ ವಕೀಲ ಗಿರೀಶ್ ಕುಮಾರ್ ಗಂಗೊಳ್ಳಿ, ವಿಜಯವಾಣಿ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಸಮಾಜ ಸೇವಕ ಪ್ರಭಾಕರ ಎ.ಕುಂದಾಪುರ, ಪ್ರಗತಿಪರ ಕೃಷಿಕ ರವೀಂದ್ರ ಸುಣ್ಣಾರಿ ಸನ್ಮಾನಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾಜು ಕೆ.ಸಿ.ಬೆಟ್ಟಿನಮನೆ, ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷೆ ಗೀತಾ ಸುರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್ ಬಾರ್ಕೂರು, ಚಂದ್ರ ಹಳೆಗೇರಿ, ಎನ್.ಎ.ನೇಜಾರು, ಮಂಜುನಾಥ ನಾಗೂರು ಇದ್ದರು.

ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಹೋರಾಟದ ಹಾಡಿನ ಮೂಲಕ ಪ್ರಾರ್ಥಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು. ನಾಗರಾಜ್ ಉಪ್ಪುಂದ, ರಾಜಶೇಖರ್ ಗುಲ್ಲಾಡಿ, ಸುರೇಶ್ ಬಾರ್ಕೂರು, ಚೈತ್ರ ಬೈಂದೂರು ಮತ್ತು ರಾಜು ಬೆಟ್ಟಿನಮನೆ ಸನ್ಮಾನ ಪತ್ರ ವಾಚಿಸಿ, ವಂದಿಸಿದರು.

 

Exit mobile version