Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಶ್ರೀನಿವಾಸದ್ವಯರ ಜಂಟಿ ಮತಯಾಚನೆ

ವಿಜಯ ಸಂಕಲ್ಪ ಪಾದಯಾತ್ರೆ ಜೊತೆಯಾಗಿ ಹೆಜ್ಜೆ ಹಾಕಿದ ನಾಯಕರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಸ್ತ್ರಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಪಾದಯಾತ್ರೆಯಲ್ಲಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಜೊತೆಯಾಗಿ ಹೆಜ್ಜೆಹಾಕಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

ಪಾದಯಾತ್ರೆ ಉದ್ಘಾಟಿಸಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸುದ್ದಿಗಾರರ ಜತೆ ಮಾತನಾಡಿ ಶೋಭಾ ಗೋಬ್ಯಾಕ್ ಎನ್ನೋದು ಟಿಕೆಟ್ ಆಕಾಂಕ್ಷಿಗಳ ಹುನ್ನಾರ. ಕಳೆದ ವಿಧಾನ ಸಭೆ ಚುನಾವಣೆ ಸಮಯದಲ್ಲಿ ವಿರೋಧಿಸಿದ ಹತ್ತಾರು ಜನ ಶೋಭಾ ಗೋಬ್ಯಾಕ್ ಎನ್ನುವ ಹುಯಿಲೆಬ್ಬಿಸಿದ್ದಾರೆ. ಇದರಿಂದ ಶೋಭಾ ಕರಂದ್ಲಾಜೆ ಗೆಲವು ತಡೆಯಲು ಆಗೋದಿಲ್ಲ. ಜಾತಿ ಸಂಘಟನೆ ಹೆಸರಲ್ಲಿ ಮತಕೇಳುವುದಕ್ಕೆ ಇದೇನು ಸಂಘಟನೆ ಚುನಾವಣೆಯಲ್ಲ. ರಾಷ್ಟ್ರ ನಿರ್ಮಾಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚುನಾವಣೆ ಜಾತಿ ಆಧಾರಿತ ಮತ ಯಾಚನೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.

ಶೋಭಾ ಗೋಬ್ಯಾಕ್, ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎನ್ನೋದು ಹತ್ತಾರು ಜನ ಹಾಗೂ ಟಿಕೇಟ್ ಆಕಾಂಕ್ಷಿಗಳ ಹುನ್ನಾರ. ಶೋಭಾ ಹೋದಲ್ಲೆಲ್ಲಾ ಅವರನ್ನು ಮತದಾರರು ವಿರೋಧಿಸಿದ್ದಾರೆ ಎನ್ನೋದು ಸತ್ಯಕ್ಕೆ ದೂರವಾದ ಮಾತು. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಶೋಭಾ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕಳೆದ ಲೋಕಸಭೆಯಲ್ಲಿ ಬಿಜೆಪಿ ಗೆದ್ದ ಸ್ಥಾನಕ್ಕಿಂತ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಗೆಲವಿನ ಓಟಕ್ಕೆ ಬ್ರೇಕ್ ಹಾಕಲು ಸಾಧ್ಯವಿಲ್ಲ. ಹಾಸನದಲ್ಲಿ ಎ. ಮಂಜು, ಮಂಡ್ಯಾದಲ್ಲಿ ಸುಮಲತಾ, ತುಮಕೂರಿನಲ್ಲಿ ಬಸವರಾಜ್ ಸೇರಿ ೨೫ ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಶಾಸ್ತ್ರಿ ವೃತ್ತದಿಂದ ಹೊರಟ ಪಾದಯಾತ್ರೆ ಹೊಸ ಬಸ್ ನಿಲ್ದಾಣ ಮೂಲಕ ಪುನಹ ಶಾಸ್ತ್ರಿ ವೃತ್ತದಲ್ಲಿ ಸಮಾಪನಗೊಂಡಿತು. ಪಾದಾಯಾತ್ರೆಯಲ್ಲಿ ಸಾವಿರಾರು ಕಾರ‍್ಯಕರ್ತರು ಪಾಲ್ಗೊಂಡಿದ್ದು ಇಡೀ ಮುಖ್ಯರಸ್ತೆ ಕಾವಿಮಯವಾಗಿ ಪರಿವರ್ತನೆ ಗೊಂಡಿತು. ಮತ್ತೊಮ್ಮೆ ಮೋದಿ, ಚೌಕಿದಾರ್, ಪರ ಘೋಷಣೆ ಕೋಗಿದರು.

ಜಿಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ತಾಪಂ ಸದಸ್ಯೆ ರೂಪಾ ಪೈ, ಮಹಿಳಾ ಮೋರ್ಚಾ ಅಧ್ಯಕ್ಷ ಗುಣರತ್ನಾ, ಮಂಡಲ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಪ್ರಧಾನ ಕಾರ‍್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ ಇನ್ನಿತರ ನಾಯಕರ ಪಾಲ್ಗೊಂಡಿದ್ದರು.

Exit mobile version