Kundapra.com ಕುಂದಾಪ್ರ ಡಾಟ್ ಕಾಂ

ಅಪಘಾತದಲ್ಲಿ ಮೃತರಾದ ಪೊಲೀಸ್ ಹೆಚ್‌ಸಿ ಚಂದ್ರಶೇಖರ್‌ಗೆ ಅಂತಿಮ ನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತ ಪಟ್ಟ ಕುಂದಾಪುರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಬಿ.ಚಂದ್ರಶೇಖರ (42) ಅವರ ಪಾರ್ಥಿವ ಶರೀರಕ್ಕೆ ಮಂಗಳವಾರ ಬೆಳಿಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಅಂತಿಮ ನಮನಗಳನ್ನು ಸಲ್ಲಿಸಲಾಯಿತು.

ಭಾನುವಾರ ರಾತ್ರಿ ಬ್ರಹ್ಮಾವರದಿಂದ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾಬುಕೊಳ ಸೇತುವೆ ಬಳಿ ಸಂಭವಿಸಿದ ಅಪಘಾತದಿಂದ ಚಂದ್ರಶೇಖರ್ ಮೃತರಾಗಿದ್ದರು. ಉಡುಪಿಯ ಜಿಲ್ಲಾ ಸಶಸ್ತ್ರ ಪಡೆಯ ಕೇಂದ್ರ ಸ್ಥಾನದಲ್ಲಿ ಇಲಾಖಾ ಅಂತಿಮ ಗೌರವ ವಂದನೆಯ ಬಳಿಕ ಪಾರ್ಥಿವ ಶರೀರವನ್ನು ಕುಂದಾಪುರಕ್ಕೆ ತರಲಾಗಿತ್ತು. ಈ ವೇಳೆ ಪೊಲೀಸ್‌, ಗ್ರಹ ರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ಕರ್ತವ್ಯ ನಿಮಿತ್ತ ಬ್ರಹ್ಮಾವರ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳಿ ಹಿಂತಿರುಗುತ್ತಿದ್ದ ವೇಳೆ ಮಾಬುಕೊಳದ ಸೇತುವೆ ಬಳಿ ಅವರ ಬೈಕ್‌ಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತಕ್ಷಣ ವೈದ್ಯಕೀಯ ನೆರವು ದೊರಕಿರಲಿಲ್ಲ.

ಕರ್ತವ್ಯ ನಿಮಿತ್ತ ಉಡುಪಿ ಕಡೆಗೆ ಹೋಗಿ ಹಿಂತಿರುಗುತ್ತಿದ್ದ ಕುಂದಾಪುರ ಠಾಣೆಯ ಸಹಾಯಕ ಉಪನಿರೀಕ್ಷಕರುಗಳಾದ ಅಶೋಕ ಹಾಗೂ ಪಾಂಡುರಂಗ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬೈಕ್‌ನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿದ್ದಾರೆ. ಅದೇ ದಾರಿಯಲ್ಲಿ ಬರುತ್ತಿದ್ದ ಕುಂದಾಪುರದ ಎಸ್‌.ಐ ಹರೀಶ್‌ ನಾಯಕ್‌ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದೂರವಾಣಿ ಕರೆಗೆ ಸ್ಪಂದಿಸಿದ ಅವರು ಚಂದ್ರಶೇಖರ ಅವರನ್ನು ತಕ್ಷಣ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ ಮೃತ ಪಟ್ಟಿದ್ದಾರೆ.

24 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ 3–4 ವರ್ಷಗಳಿಂದ ಕುಂದಾಪುರ ಪೊಲೀಸ್‌ ಠಾಣೆಯ ಅಪರಾಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ಅವರ ಪಾರ್ಥಿವ ಶರೀರದ ಅಂತಿಮ ಕ್ರೀಯೆಯನ್ನು ಉಪ್ಪಿನಕುದ್ರುವಿನ ಅವರ ಸ್ವಗ್ರಹದ ಬಳಿಯಲ್ಲಿ ನೆರವೇರಿಸಲಾಯಿತು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ಡಿ.ಆರ್‌, ಉಪನಿರೀಕ್ಷಕರುಗಳಾದ ಹರೀಶ್‌ ಆರ್‌ ನಾಯಕ್‌, ಶ್ರೀಧರ ನಾಯಕ್‌ ಇದ್ದರು.

Also Read:
► ಕುಂದಾಪುರ: ಅಫಘಾತದಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ನಿಧನ – https://kundapraa.com/?p=31780 

Exit mobile version