ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೈವಸ್ಥಾನಗಳು ಸ್ವಾಭಿಮಾನ ಹಾಗೂ ಪ್ರತಿಭಟನೆಯ ಕೇಂದ್ರಗಳಾಗಿ ಸ್ಥಾಪಿತವಾದವುಗಳು. ಅವು ನಿಜವಾಗಿ ನಮ್ಮ ಸಮುದಾಯದ ಮೂಲವಾಗಿದ್ದು ಸರಳವಾದ ಆಚರಣೆ, ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಮತ್ತು ಮನುಷ್ಯ ಕೇಂದ್ರವಾಗಿ ಯೋಚನೆ ಮಾಡುವ ಕ್ರಮವೇ ಇಲ್ಲಿ ಪ್ರಧಾನವಾದುದು ಎಂದು ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು ಹೇಳಿದರು.
ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಒಳ್ಳೆಯದನ್ನು ಹಾಗೂ ಉಪಕಾರ ಮಾಡುವವರನ್ನು ದೇವರಂತೆ ಭಾವಿಸುವುದು ಮನುಷ್ಯಸಹಜ ಗುಣವಾಗಿದ್ದು, ಕರಾವಳಿಯ ಬಹುಪಾಲು ದೈವಗಳು ಇಂತಹ ಗುಣಗಳಿಂದಲೇ ದೈವತ್ವದ ಸ್ಥಾನ ಪಡೆದು ಇಂದಿಗೂ ಪೂಜಿಸಲ್ಪಡುತ್ತಿದೆ. ಇಲ್ಲಿ ಮೇಲು ಕೀಳು ಎಂಬ ಭೇದಭಾವವಿಲ್ಲದೇ, ಹತ್ತಿರದಿಂದ ದೇವರನ್ನು ಕಾಣುವ ಕ್ರಮ ರೂಡಿಯಲ್ಲಿದೆ. ದೈವಸ್ಥಾನದ ಆಚರಣೆಗಳು ಸಮುದಾಯದ ರೂಪಕವಾಗಿದ್ದು ಮುಂದಿನ ತಲೆಮಾರು ಚೈತನ್ಯಶೀಲರಾಗಿ ಪುನಃ ಬೇರನ್ನು ಕಂಡುಕೊಂಡು, ಸಹಬಾಳ್ವೆಯ ಸಮಾಜವನ್ನು ಕಂಡುಕೊಳ್ಳುವಂತಾಗಬೇಕು ಎಂದು ಆಶಿಸಿದರು.
ಮುಂಬೈ ಉದ್ಯಮಿ ಮಂಜುನಾಥ ಪೂಜಾರಿ ಬಾರನಮನೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಕುಸುಮ ಹೋಮ್ಸ್‌ನ ಮ್ಯಾನೆಜಿಂಗ್ ಟ್ರಸ್ಟಿ ನಳಿನ್‌ಕುಮಾರ್ ಶೆಟ್ಟಿ, ಪ್ರಧಾನ ಅರ್ಚಕ ಶಿವಾನಂದ ಅಡಿಗ, ಪಾತ್ರಿ ನಾರಾಯಣ ಪೂಜಾರಿ ದೊಂಬೆ, ಉದ್ಯಮಿ ಸುರೇಶ್ ನಾಯ್ಕ್ ಶಿರಸಿ ಉಪಸ್ಥಿತರಿದ್ದರು.
ಈ ಸಂದರ್ಭ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಭಾಸ್ಕರ ಬಿಲ್ಲವ ವಂದಿಸಿದರು. ಉಪನ್ಯಾಸಕ ಪಂಜು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
