Kundapra.com ಕುಂದಾಪ್ರ ಡಾಟ್ ಕಾಂ

ಪ್ರಕೃತಿಯನ್ನು ಪ್ರೀತಿಸಿದಾಗಲೇ ಪರಿಸರ ಹಸಿರಾಗೋದು: ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್‌ನ 14ನೇ ವರ್ಷದ ವಾರ್ಷಿಕೋತ್ಸವವನ್ನು ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ ಮಕ್ಕಳಿಲ್ಲದ ನಾವು ಗಿಡಗಳನ್ನು ನೆಟ್ಟು ಅವುಗಳನ್ನು ಕಷ್ಟಪಟ್ಟು ಮಕ್ಕಳಂತೆ ತಬ್ಬಿಕೊಂಡು ಮುತ್ತಿಕ್ಕಿ ಸಾಕಿ ಸಲಹಿದ್ದರಿಂದ ಇಂದು ನಾನು ಸಾವಿರ ಮಕ್ಕಳ ತಾಯಿಯಾಗಿದ್ದೇನೆ ಎಂದು ಹೇಳಿದರು. ಮಕ್ಕಳಿಲ್ಲದ ಕೊರಗನ್ನು ನೀಗಿಸಿಕೊಳ್ಳುವ ಉದ್ದೇಶದಿಂದ ಅವಿದ್ಯಾವಂತರೂ ಆಗಿದ್ದ ನಾನು ಮತ್ತು ನನ್ನ ಪತಿ ಅತ್ಯಂತ ಕಷ್ಟದಲ್ಲಿ ವರ್ಷಕ್ಕೆ ಹತ್ತು ಗಿಡಗಳಂತೆ ಹತ್ತು ವರ್ಷಗಳಲ್ಲಿ ಸುಮಾರು ನಾಲ್ಕು ಕಿಮಿ ಉದ್ದಕ್ಕೂ ಮರಗಳನ್ನು ಬೆಳೆಸಿದ್ದರಿಂದ ಇಂದು ಪಕ್ಷಿಗಳಿಗೆ ಆಶ್ರಯ ಹಾಗೂ ದಾರಿಹೋಕರಿಗೆ ನೆರಳು ನೀಡುವಂತಾಗಿದೆ. ಈ ನೆಲೆಯಲ್ಲಿ ಇಂದಿನ ಪೀಳಿಗೆಯವರೂ ಕೂಡಾ ಪ್ರಕೃತಿಯನ್ನು ಪ್ರೀತಿಸುವದ ಮೂಲಕ ತಮ್ಮ ಪರಿಸರದಲ್ಲಿ ಗಿಡಗಳನ್ನು ಬೆಳೆಸಿದಲ್ಲಿ ಭೂಮಿ ಹಸಿರಾಗಿ ಸಂಪತ್ಭರಿತವಾಗುತ್ತದೆ ಎಂದರು.ಯೂತ್ ಕ್ಲಬ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ವಸಂತ ಹೆಗ್ಡೆ, ನಿವೃತ್ತ ಶಿಕ್ಷಕ ಕೃಷ್ಣಯ್ಯ ಶೇರುಗಾರ್, ಕಾರ್ಯದರ್ಶಿ ಗಣೇಶ ಕಳವಾಡಿ, ತಿಮ್ಮಕ್ಕನವರ ಸಾಕುಮಗ ಉಮೇಶ್, ಸೊಸೆ ವನಶ್ರೀ ಉಪಸ್ಥಿತರಿದ್ದರು.

ಈ ಸಂದರ್ಭ ಯಕ್ಷಗಾನ ಕ್ಷೇತ್ರದ ಸಾಧಕ ಹೆರಂಜಾಲು ಸುಬ್ಬಣ್ಣ ಗಾಣಿಗ, ಕ್ರೀಡಾ ಕ್ಷೇತ್ರದ ಶಾಂತಾ ಕುಮಾರಿ ಜಿ., ಗುರುರಾಜ ಪೂಜಾರಿ, ಮಂಜುನಾಥ ಮರಾಠಿ, ರಂಗಭೂಮಿ ಕ್ಷೇತ್ರದ ಯೋಗೀಶ್ ಬಂಕೇಶ್ವರ್, ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧಾ ವಿಜೇತರಾದ ಸಾಘವಿ, ಸಮೃದ್ಧಿ ಇವರನ್ನು ಸನ್ಮಾನಿಸಲಾಯಿತು. ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರನ್ನು ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟ್ರಸ್ಟಿನ ಲೆಕ್ಕಪರಿಶೋಧಕ ಬಾಲರಾಜ್ ಆರ್. ಕೊಠಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಜಿ. ನಿರೂಪಿಸಿದರು. ಪ್ರದೀಪ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

 

 

Exit mobile version